ಮುಷ್ಕರಕ್ಕೆ ಸಡ್ಡು ಹೊಡೆದ ಸರ್ಕಾರ, ಖಾಸಗಿ ವಾಹನಗಳಿಗೆ ‘ರಹದಾರಿ’ ಮುಕ್ತ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.7- ಸಾರಿಗೆ ನಿಗಮಗಳ ನೌಕರರ ಮುಷ್ಕರಕ್ಕೆ ಸಡ್ಡು ಹೊಡೆದಿರುವ ರಾಜ್ಯ ಸರ್ಕಾರ ಖಾಸಗಿ ವಾಹನಗಳು ಎಲ್ಲಿ ಬೇಕಾದರೂ ಸಂಚರಿಸಲು ಅನುಕೂಲವಾಗುವಂತೆ ರಹದಾರಿ ವಿನಾಯಿತಿಯನ್ನು ಘೋಷಣೆ ಮಾಡಿದೆ. ಇಂದು ಬೆಳಗ್ಗೆ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಎಂ.ಸತ್ಯವತಿ ಅವರು ಸರ್ಕಾರದ ಸೂಚನೆ ಮೇರೆಗೆ ಅಧಿಸೂಚನೆ ಹೊರಡಿಸಿದ್ದು, ಮೋಟಾರು ವಾಹನ ಕಾಯ್ದೆ-1988ರ ಸೆಕ್ಷನ್ 66 (1)ರಂತೆ ಅಗತ್ಯವಿರುವ ರಹದಾರಿಯಿಂದ ಖಾಸಗಿ ವಾಹನಗಳಿಗೆ ವಿನಾಯಿತಿ ನೀಡಿರುವುದಾಗಿ ತಿಳಿಸಿದ್ದಾರೆ.

ಈ ಮೂಲಕ ಖಾಸಗಿ ವಾಹನಗಳು ಬೆಂಗಳೂರು ನಗರ ಸೇರಿದಂತೆ ರಾಜ್ಯದ ಯಾವುದೇ ಮಾರ್ಗದಲ್ಲಿ, ಯಾವುದೇ ಊರಿಗೆ ರಹದಾರಿ ರಹಿತವಾಗಿ ಸಂಚರಿಸಬಹುದು. ಈವರೆಗೂ ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳ ಬಸ್‍ಗಳು ಸಂಚಾರ ಮಾಡುತ್ತಿದ್ದವು. ಖಾಸಗಿ ವಾಹನಗಳಿಗೆ ರಹದಾರಿ ನೀಡಲಾಗುತ್ತಿತ್ತು. ಅನುಮತಿ ಪಡೆದ ಮಾರ್ಗಗಳಲ್ಲಿ ಮಾತ್ರ ಖಾಸಗಿ ವಾಹನಗಳು ಸಂಚರಿಸಬೇಕಿತ್ತು.

ಸಾರಿಗೆ ನಿಗಮಗಳ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇಂದಿನಿಂದ ಅನಿರ್ದಿಷ್ಟ ಕಾಲ ಮುಷ್ಕರ ಆರಂಭಿಸಿರುವುದರಿಂದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಉಂಟಾಗುವ ತೊಂದರೆ ತಪ್ಪಿಸುವ ಸಲುವಾಗಿ ಮೋಟಾರು ವಾಹನ ಕಾಯ್ದೆ ಸೆಕ್ಷನ್ 66 (3)(ಎಫ್) ಅಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಮುಷ್ಕರದ ಅವಧಿವರೆಗೂ ಖಾಸಗಿ ವಾಹನಗಳಿಗೆ ರಹದಾರಿ ವಿನಾಯಿತಿ ನೀಡುವುದಾಗಿ ತಿಳಿಸಿದ್ದಾರೆ. ಈ ಮೂಲಕ ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸಿ ಜನರಿಗಾಗುವ ತೊಂದರೆ ತಪ್ಪಿಸಲು ಸರ್ಕಾರ ಪ್ರಯತ್ನಿಸಿದೆ.

Facebook Comments