ಹುಬ್ಬಳ್ಳಿ ಸೇರಿ 13 ವಿಮಾನ ನಿಲ್ದಾಣಗಳ ಖಾಸಗೀಕರಣಕ್ಕೆ ಕೇಂದ್ರ ತಯಾರಿ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ,26- ರಾಜ್ಯದ ಹುಬ್ಬಳ್ಳಿ ಸೇರಿದಂತೆ ದೇಶದ 13 ವಿಮಾನ ನಿಲ್ದಾಣಗಳನ್ನು ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ರಾಷ್ಟ್ರೀಯ ಹಣಗಳಿಕೆ ಯೋಜನೆಯಡಿ ದೇಶದ ಏಳು ಸಣ್ಣ ಹಾಗೂ ಆರು ದೊಡ್ಡ ವಿಮಾನ ನಿಲ್ದಾಣಗಳನ್ನು 50 ವರ್ಷಕ್ಕೆ ಅವಧಿಗೆ ಖಾಸಗಿಯವರಿಗೆ ಗುತ್ತಿಗೆ ನೀಡಲು ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಕೇಂದ್ರ ಸರ್ಕಾರದ ವಿಮಾನಯಾನ ಸಚಿವಲಾಯಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಮುಂದಿನ ನಾಲ್ಕು ವರ್ಷದಲ್ಲಿ 25 ವಿಮಾನ ನಿಲ್ದಾಣಗಳನ್ನು ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಡಿ ನೀಡಲು ಕೇಂದ್ರ ಸರ್ಕಾರ ಈಗಾಗಲೇ ನಿರ್ಧರಿಸಿದೆ. ಅದರ ಭಾಗವಾಗಿ ಈಗಾಗಲೇ 2019ರಲ್ಲಿ ಆರು ವಿಮಾನ ನಿಲ್ದಾಣಗಳು ಅದಾನಿ ಗ್ರೂಪ್ ಪಾಲಾಗಿವೆ. ಉಳಿದಂತೆ ಕುಶಿನಗರ್, ಗಯಾ, ಅಮೃತ್‍ಸರ್, ಕಂಗ್ರಾ, ಭುವನೇಶ್ವರ್, ತಿರುಪತಿ, ರಾಯಪುರ್, ಔರಂಗಾಬಾದ್, ಇಂದೋರ್, ಜಬಲಾಪುರ್, ತಿರುಚಿ, ಹುಬ್ಬಳ್ಳಿ ವಿಮಾನ ನಿಲ್ದಾಣಗಳನ್ನು ಖಾಸಗಿಯವರಿಗೆ ನೀಡಲು ಹೊಸದಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.

ಈ ಮೊದಲು 2005-06ರಲ್ಲಿ ನಿರ್ಮಾಣ, ನಿರ್ವಹಣೆ, ಹಸ್ತಾಂತರ ಆಧಾರದ ಮೇಲೆ ದೆಹಲಿ, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್ ವಿಮಾನಗಳನ್ನು ಖಾಸಗಿಯವರಿಗೆ ನೀಡಲಾಗಿತ್ತು. ಈಗಾಗಲೇ ನಿರ್ಮಾಣಗೊಂಡು ಕಾರ್ಯಾಚರಣೆ ಮಾಡುತ್ತಿರುವ ವಿಮಾಣ ನಿಲ್ದಾಣಗಳನ್ನು ಎರಡನೇ ಹಂತದಲ್ಲಿ ಖಾಸಗೀಕರಣಗೊಳಿಸುವ ಪ್ರಸ್ತಾವನೆ ಸಲ್ಲಿಕೆಯಾಗಿದೆ.

ಪ್ರತಿ ಪ್ರಯಾಣಿಕನ ಆದಾಯ ಮಾದರಿ ಆಧರಿಸಿ ಗುತ್ತಿಗೆ ನೀಡಲಾಗುತ್ತದೆ. ಈ ಮೊದಲು ಗ್ರೇಟರ್ ನೋಯಿಡಾದ ಜೆವರ್ ವಿಮಾನ ನಿಲ್ದಾಣವನ್ನು ಈ ಮಾದರಿಯಲ್ಲಿ ಗುತ್ತಿಗೆ ನೀಡಲಾಗಿದೆ. ಅದನ್ನೇ ಆಧರಿಸಿ ಉಳಿದ ವಿಮಾನ ನಿಲ್ದಾಣಗಳನ್ನು ಖಾಸಗಿಯವರಿಗೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ ಎಂದು ಪ್ರಾಕಾರದ ಅಧ್ಯಕ್ಷ ಸಂಜೀವ್ ಕುಮಾರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

Facebook Comments