ಕೊರೊನಾ ನಿರ್ವಹಣೆಯಲ್ಲಿ ಸರ್ಕಾರದ ಹೊಣೆಗೇಡಿತನ : ಪ್ರಿಯಾಂಕ್ ಖರ್ಗೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.22- ಇಂಗ್ಲೆಂಡ್‍ನಲ್ಲಿ ಹೊಸ ತಳಿಯ ಕೊರೊನಾ ಸೋಂಕು ಪತ್ತೆಯಾದ ಬಳಿಕವೂ ವಿಮಾನ ನಿಲ್ದಾಣದಲ್ಲಿ ಪರೀಕ್ಷಾ ಕೇಂದ್ರ ಸ್ಥಾಪನೆ ಮಾಡದೆ, ವಿದೇಶಿ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡದೆ ಅಪಾಯಕಾರಿ ಸೋಂಕು ದೇಶದಲ್ಲಿ ಹರಡಲು ಸರ್ಕಾರಗಳೇ ಅವಕಾಶ ಮಾಡಿಕೊಟ್ಟಿವೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಕೊರೊನಾ ನಿರ್ಲಕ್ಷ್ಯಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮತ್ತೆ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿವೆ. ಕಳೆದ ವರ್ಷ ಇದೇ ವೇಳೆಗೆ ಕೊರೊನಾ ಕಂಡುಬಂದ ಆರಂಭದಲ್ಲಿ ಸೋಂಕನ್ನು ಕಡೆಗಣಿಸಿತ್ತು. ಆಗ ತಕ್ಷಣ ಎಚ್ಚೆತ್ತುಕೊಂಡು ವಿದೇಶದಿಂದ ಬಂದವರನ್ನು ಕ್ವಾರಂಟೈನ್ ಮಾಡಿದ್ದರೆ ಸೋಂಕು ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರಲಿಲ್ಲ.

ಕೆಲವರನ್ನು ಕ್ವಾರಂಟೈನ್ ಮಾಡುವ ಅವಕಾಶವನ್ನು ಕೈಚೆಲ್ಲಿದ ಕೇಂದ್ರ ಸರ್ಕಾರ, ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಅವೈಜ್ಞಾನಿಕವಾಗಿ ಲಾಕ್‍ಡೌನ್ ಜಾರಿ ಮಾಡಿ ಇಡೀ ದೇಶವನ್ನೇ ಅಧೋಗತಿಗೆ ತಳ್ಳಿತ್ತು ಎಂದು ಕಿಡಿಕಾರಿದ್ದಾರೆ.ಈಗ ಮತ್ತೊಮ್ಮೆ ಅದೇ ರೀತಿಯ ನಿರ್ಲಕ್ಷ್ಯವನ್ನು ಸರ್ಕಾರಗಳು ಅನುಸರಿಸಿವೆ. ಇತ್ತೀಚೆಗೆ ಸೋಂಕು ಇಳಿಮುಖವಾಗಿದೆ ಎಂದು ಎಲ್ಲಾ ಮುನ್ನೆಚ್ಚರಿಕೆಗಳನ್ನು ಗಾಳಿಗೆ ತೂರಲಾಗಿತ್ತು.

ಜನರಿಗೆ ಮಾತ್ರ ಮಾಸ್ಕ್ ಧರಿಸಬೇಕೆಂದು ಒತ್ತಡ ಹೇರಿ ದಂಡ ವಸೂಲಿ ಮಾಡಲಾಗುತ್ತಿದೆ. ಆದರೆ, ಸರ್ಕಾರ ಮಾತ್ರ ತನ್ನ ಪಾಲಿನ ಜವಾಬ್ದಾರಿಗಳಿಂದ ನುಣಚಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ಶಾಲಾ ಕಾಲೇಜು ಆರಂಭಿಸಲಾಗುತ್ತಿದೆ. ಸಂಪನ್ಮೂಲ ಕ್ರೋಢಿಕರಣಕ್ಕಾಗಿ ಎಲ್ಲಾ ವಾಣಿಜ್ಯ ಚಟುವಟಿಕೆಗಳನ್ನು ಮುಕ್ತವಾಗಿ ತೆರೆದಿಡಲಾಗಿದೆ.

ಎಲ್ಲಿಯೂ ಸಾಮಾಜಿಕ ಅಂತರ ಕಾಪಾಡುತ್ತಿಲ್ಲ. ಸರ್ಕಾರ ಕಂಡೂ ಕಾಣದಂತಿದೆ. ಕಳೆದ ಸೆಪ್ಟಂಬರ್‍ನಲ್ಲೇ ಇಂಗ್ಲೆಂಡ್‍ನಲ್ಲಿ ಸಕ್ರಿಯವಾಗಿರುವ ಹೊಸ ತಳಿಯ ಕೊರೊನಾ ವೈರಸ್ ಕೋವಿಡ್ -19ಗಿಂತಲೂ ಶೇ.70ರಷ್ಟು ವೇಗವಾಗಿ ಹರಡುತ್ತಿದೆ ಎಂಬ ವರದಿ ಇತ್ತು. ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಬಹಿರಂಗಗೊಂಡು ವಾರವಾಗಿದೆ. ಆದರೂ ವಾರದಿಂದ ನಮ್ಮ ದೇಶದ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿಲ್ಲ.

ಭಾನುವಾರ ಇಂಗ್ಲೆಂಡ್‍ನಲ್ಲಿ ಲಾಕ್‍ಡೌನ್ ಘೋಷಣೆಯಾಗಿ, ಬೇರೆ ಬೇರೆ ದೇಶಗಳು ಇಂಗ್ಲೆಂಡ್ ವಿಮಾನಗಳನ್ನು ನಿರ್ಬಂಧಿಸಿದ ಬಳಿಕ ಸೋಮವಾರ ಭಾರತ ಸರ್ಕಾರ ವಿಶೇಷ ಸಭೆ ನಡೆಸಿದೆ. ಆದಾಗ್ಯೂ ನಮ್ಮ ಸರ್ಕಾರ ಮೈಮರೆತಿಲ್ಲ, ಎಚ್ಚರದಿಂದ ಇದೆ ಎಂಬ ಹೇಳಿಕೆಯನ್ನು ಕೇಂದ್ರ ಆರೋಗ್ಯ ಸಚಿವರು ನೀಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಇಂಗ್ಲೆಂಡ್‍ನಿಂದ 2 ದಿನದಲ್ಲಿ 291 ಮಂದಿ ಭಾರತಕ್ಕೆ ಬಂದಿದ್ದಾರೆ. ಅವರಲ್ಲಿ 69 ಮಂದಿ ಬಳಿ ಕೊರೊನಾ ನೆಗೆಟಿವ್ ವರದಿ ಇಲ್ಲ. ಕರ್ನಾಟಕಕ್ಕೆ 138 ಮಂದಿ ಬಂದಿದ್ದಾರೆ. ಜನರಿಗೆ ಮಾಸ್ಕ್ ಹಾಕಿಲ್ಲ ಎಂದು ದಂಡ ಹಾಕುವ ಸರ್ಕಾರ ವಿದೇಶದಿಂದ ಬರುವವರನ್ನು ಪರೀಕ್ಷಿಸದೆ ಒಳ ಬಿಡುತ್ತಿದೆ. ವಿದೇಶಿ ಪ್ರವಾಸಿಗರನ್ನು ಕ್ವಾರಂಟೈನ್ ಕೂಡ ಮಾಡುತ್ತಿಲ್ಲ. ಹಾಗಿದ್ದರೆ ಸರ್ಕಾರ ಎಚ್ಚರವಾಗಿರುವುದಾದರೂ ಎಲ್ಲಿ ಎಂದು ಪ್ರಶ್ನಿಸಿದ್ದಾರೆ.

ಕೊರೊನಾ ಸಾಮಾಗ್ರಿ ಖರೀದಿಯಲ್ಲಿನ ಕಮಿಷನ್ ಪಡೆಯಲು, ಚಿಕಿತ್ಸೆ ಹೆಸರಿನಲ್ಲಿ ಲೂಟಿ ಮಾಡುವುದರಲ್ಲಿ ಮಾತ್ರ ಸರ್ಕಾರ ಎಚ್ಚರವಾಗಿದೆ. ಈಗಾಗಲೇ ದೇಶದಲ್ಲಿ 1.45 ಲಕ್ಷ ಮಂದಿ ಕೊರೊನಾ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ, ಆರ್ಥಿಕತೆ ನೆಲಕಚ್ಚಿ ಹೋಗಿದೆ. ಇಷ್ಟಾದರೂ ಸರ್ಕಾರ ಎಚ್ಚರಿಕೆ ವಹಿಸಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಇಂಗ್ಲೆಂಡ್‍ನಿಂದ ಬಂದವರನ್ನು ದೇಶದ ಒಳಗೆ ಬರಲು ಸುಲಭವಾಗಿ ಬಿಡಲಾಗಿದೆ. ಅವರಿಂದ ಹೊಸ ತಳಿಯ ಸೋಂಕು ಹಬ್ಬಿದರೆ ಅದಕ್ಕೆ ಯಾರು ಹೊಣೆ. ಮತ್ತೆ ಚಿಕಿತ್ಸೆ ಹೆಸರಿನಲ್ಲಿ ಲೂಟಿ ಹೊಡೆಯಲು ಬೊಕ್ಕಸದಲ್ಲೂ ಹಣ ಇಲ್ಲ. ಹಾಗಿದ್ದೂ ಸರ್ಕಾರ ಜನರ ಪ್ರಾಣದ ಜೊತೆ ಆಟ ಆಡುತ್ತಿರುವುದೇಕೆ ? ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

Facebook Comments