ಉತ್ತರ ಪ್ರದೇಶದದಲ್ಲಿ ಮಹಿಳಾ ಭದ್ರತೆ ಬಗ್ಗೆ ಪ್ರಿಯಾಂಕ ಕಿಡಿ
ನವದೆಹಲಿ, ಜ.13- ಮಹಿಳಾ ಮತ್ತು ಮಕ್ಕಳ ಸುರಕ್ಷತೆಯಲ್ಲಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಲಕ್ಷತೆ ವಹಿಸಿದ್ದು, ಬೇಟಿ ಬಚಾವ್ ಬೇಟಿ ಪಡಾವ್ ಹಾಗೂ ಮಿಷನ್ ಶಕ್ತಿಯಂತಹ ಯೋಜನೆಗಳನ್ನು ತಮ್ಮ ಪಕ್ಷದ ಪ್ರಚಾರಕ್ಕಾಗಿ ಮಾತ್ರ ಬಳಸಿಕೊಂಡಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ವಾಡ್ರಾ ಕಿಡಿಕಾರಿದ್ದಾರೆ. ಅವರು ಬುಧವಾರ ಮಾತನಾಡಿ, ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ಯಾವ ರೀತಿಯಲ್ಲೂ ರಕ್ಷಣೆ ಇಲ್ಲ.
ಇನ್ನೂ ಕೇಂದ್ರ ಸರ್ಕಾರದ ಜಾರಿಗೆ ತಂದಿರುವ ಮಹಿಳಾ ಭದ್ರತೆ ಯೋಜನೆಗಳು ಕೇವಲ ಸರ್ಕಾರದ ಹಾಗೂ ಪಕ್ಷದ ಪ್ರಚಾರಕ್ಕಾಗಿ ಮಾತ್ರ ಬಳಸಿಕೊಳ್ಳಲಾಗುತ್ತ್ತಿದೆ. ಮಹಿಳೆಯರ, ಮಕ್ಕಳ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲವೇ ಇಲ್ಲದಂತೆ ಯೋಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಿಯಾಂಕ ತಮ್ಮ ಫೇಸ್ಬುಕ್ನ ಹಿಂದಿ ಪೇಜ್ನಲ್ಲಿ, ಇತ್ತೀಚಿನ ದಿನಗಳಲ್ಲಿ ಉತ್ತರ ಪ್ರದೇಶದ ಹಲವು ಕಡೆ ಮಹಿಳೆಯರ ಮೇಲೆ ನಡೆದಿರುವ ದೌರ್ಜನ್ಯ, ಅತ್ಯಾಚಾರ ಹಾಗೂ ಕೊಲೆ ಅಪರಾಧ ಪ್ರಕರಣಗಳ ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿ ಬರೆದುಕೊಂಡಿದ್ದಾರೆ. ಯುಪಿ ಸರ್ಕಾರಕ್ಕೆ ಬೇಟಿ ಬಚಾವ್ ಮತ್ತು ಮಿಷನ್ ಶಕ್ತಿ ಕೇವಲ ಟೊಳ್ಳಾದ ಯೋಜನೆಗಳು ಎಂದಿದೆ.
ಈ ಯೋಜನೆಗಳ ಪ್ರಚಾರಕ್ಕಾಗಿ ಕೋಟ್ಯಂತರ ರೂ.ಗಳನ್ನು ಖರ್ಚು ಮಾಡಿರುವ ಯೋಗಿ ಸರ್ಕಾರ, ಮಹಿಳೆ ರಕ್ಷಣೆ ಬಗ್ಗೆ ಕಿಂಚಿತ್ತು ಕಾಳಜಿ ವಹಿಸಿಲ್ಲ. ತಳಮಟ್ಟದಲ್ಲಿ ಮಹಿಳೆಯರ ಬಗ್ಗೆ ಎಷ್ಟು ನಿರ್ಲಕ್ಷ್ಯತೆ ತೋರುತ್ತಿದ್ದಾರೆ ಎಂಬುದರ ಅರಿವು ಅವರಿಗಿಲ್ಲ.
ಇತ್ತೀಚೆಗೆ ಗೋರಖ್ಪುರದಲ್ಲಿ 12 ಮಹಿಳೆಯರು ಸಾವನ್ನಪ್ಪಿದ್ದಾರೆ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಂಡಿಲ್ಲ. ಅಪರಾಧಿಗಳಿಗೆ ಶಿಕ್ಷೆ ಕೊಡುವ ಮಾತು ಬಿಡಿ ಕೆಲವು ಕಡೆಗಳಲ್ಲಿ ಸಂತ್ರಸ್ತ ಮಹಿಳೆಯರನ್ನು ಗುರುತಿಸುವಲ್ಲಿ ಸ್ಥಳೀಯ ಪೆÇಲೀಸರು ಸೋತಿದ್ದಾರೆ ಎಂದು ಯುಪಿ ಉಸ್ತುವಾರಿಯೂ ಆಗಿರುವ ಪ್ರಿಯಾಂಕ ಟೀಕಿಸಿದ್ದಾರೆ.