ಉನ್ನಾವೋ ಸಂತ್ರಸ್ತೆ ಕುಟುಂಬ ಭೇಟಿ ಮಾಡಿದ ಪ್ರಿಯಾಂಕ, ಅಖಿಲೇಶ್ ಧರಣಿ

ಈ ಸುದ್ದಿಯನ್ನು ಶೇರ್ ಮಾಡಿ

ಲಖ್ನೋ, ಡಿ.7-ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಸಜೀವ ದಹನ ಪ್ರಕರಣದ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಈ ಕೃತ್ಯ ಖಂಡಿಸಿ ಮತ್ತು ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಇಂದು ಬೆಳಗ್ಗೆ ವಿಧಾನ ಭವನ್ ಮುಂದೆ ಧರಣಿ ಆರಂಭಿಸಿದ್ದು, ಎಸ್‍ಪಿ ಮುಖಂಡರು ಸಾಥ್ ನೀಡಿದ್ದಾರೆ.

ವಿಧಾನ ಭವನದ ಮುಖ್ಯ ಪ್ರವೇಶ ದ್ವಾರದ ಬಳಿ ಧರಣಿ ಆರಂಭಿಸಿರುವ ಯಾದವ್ ಮತ್ತು ಇತರ ಮುಖಂಡರು, ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ಸೂಕ್ತ ರಕ್ಷಣೆ ಇಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ಉನ್ನಾವೋ ಗ್ಯಾಂಗ್‍ರೇಪ್ ಸಂತ್ರಸ್ತೆ ಸಾವಿಗೆ ಉತ್ತರ ಪ್ರದೇಶ ಸರ್ಕಾರವೇ ನೇರ ಕಾರಣ.

ಈ ಪ್ರಕರಣದ ದುಷ್ಕರ್ಮಿಗಳಿಗೂ ಮತ್ತು ಬಿಜೆಪಿಗೂ ನೇರ ಸಂಪರ್ಕವಿದೆ ಎಂದು ಅಖಿಲೇಶ್ ಆರೋಪಿಸಿದರು. ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಹುಜನ ಸಮಾಜ ಪಕ್ಷ (ಬಿಎಸ್‍ಪಿ)ದ ಮುಖ್ಯಸ್ಥೆ ಮತ್ತು ಮಾಜಿ ಮುಖ್ಯಮಂತ್ರಿ ಮಾಯಾವತಿ, ಉನ್ನಾವೋ ಸಂತ್ರಸ್ತೆ ಕುಟುಂಬಕ್ಕೆ ಸೂಕ್ತ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.

ಯೋಗಿ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಧ್ರಾ, ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ಸೂಕ್ತ ರಕ್ಷಣೆ ಇಲ್ಲ. ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಪ್ರಾಣ ಅಪಾಯದಲ್ಲಿದೆ ಎಂಬುದು ತಿಳಿಸಿದ್ದರೂ ಆಕೆಗೆ ರಕ್ಷಣೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ಧಾರೆ. ಉನ್ನಾವೋ ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ಪ್ರಿಯಾಂಕಾ ಸಾಂತ್ವನ ಹೇಳಿ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ.

Facebook Comments