ಪ್ರಿಯಾಂಕ ಗಾಂಧಿ ಭೇಟಿಯಾದ ಹತ್ಯಾಕಂಡದ ಸಂತ್ರಸ್ತರು

ಈ ಸುದ್ದಿಯನ್ನು ಶೇರ್ ಮಾಡಿ

ಲಖ್ನೋ/ಮಿರ್ಜಾಪುರ,ಜು.20- ಗುಂಪು -ಘರ್ಷಣೆ ಮತ್ತು ಶೂಟೌಟ್‍ನಲ್ಲಿ ಹತರಾದ 10 ಮಂದಿಯ ಕುಟುಂಬದ ಸದಸ್ಯರೇ ಇಂದು ಮಧ್ಯಾಹ್ನ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಅವರನ್ನು ಭೇಟಿ ಮಾಡಿ ತಮಗೆ ಆದ ಅನ್ಯಾಯದ ಬಗ್ಗೆ ವಿವರಿಸಿದರು.

ನೊಂದವರ ದುಃಖದುಮ್ಮಾನಗಳನ್ನು ಆಲಿಸಿದ ಪ್ರಿಯಾಂಕ ಸಂತ್ರಸ್ತರಿಗೆ ಸೂಕ್ತ ನ್ಯಾಯ ಮತ್ತು ನೆರವಿನ ಭರವಸೆ ನೀಡಿದರು. ನಂತರ ಅವರು ವಾರಣಾಸಿಗೆ ತೆರಳಿದರು. ಇದಕ್ಕೂ ಮುನ್ನ ಕಾಂಗ್ರೆಸ್ ನಿಯೋಗ ಮತ್ತು ಜಿಲ್ಲಾಡಳಿತದ ಅಧಿಕಾರಿಗಳು, ಪೊಲೀಸರೊಂದಿಗೆ ನಡೆದ ಮಾತುಕತೆ ಇತ್ಯರ್ಥವಾದ ನಂತರ ಪ್ರಿಯಾಂಕರನ್ನು ಭೇಟಿ ಮಾಡಿದ್ದರು.

ಇದಕ್ಕೂ ಮೊದಲು ಟ್ವೀಟ್ ಮಾಡಿದ್ದ ಪ್ರಿಯಾಂಕ, ಸಂತ್ರಸ್ತರನ್ನು ಭೇಟಿಯಾಗದೆ ತಾವು ಹಿಂದಿರುಗುವುದಿಲ್ಲ.ಇದಕ್ಕಾಗಿ ಜೈಲಿಗೂ ಹೋಗಲು ಸಿದ್ದ ಎಂದು ಸವಾಲು ಹಾಕಿದರು. ನಿನ್ನೆ ಸಂತ್ರಸ್ತರನ್ನು ಭೇಟಿ ಮಾಡಲು ತೆರಳುತ್ತಿದ್ದ ಪ್ರಿಯಾಂಕ ಮತ್ತು ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಡೆದ ನಂತರ ನಿನ್ನೆ ರಾತ್ರಿ ಮಿರ್ಜಾಪುರದ ಚುನಾರ್ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದರು.

ನಿನ್ನೆ ಕಾಂಗ್ರೆಸ್ ನಿಯೋಗ ಮತ್ತು ಜಿಲ್ಲಾಡಳಿತದ ನಡುವೆ ಈ ಸಂಬಂಧ ನಡೆದ ಮಾತುಕತೆ ಫಲಪ್ರದವಾಗಲಿಲ್ಲ. ಇಂದು ಬೆಳಗ್ಗೆ ಮತ್ತೊಂದು ಸುತ್ತಿನ ಮಾತುಕತೆ ನಡೆದಿದೆ.

ಭೂ ವಿವಾದಕ್ಕೆ ಸಂಬಂಧಿಸಿದಂತೆ ಕಗ್ಗೊಲೆಯಾದ 10 ಮಂದಿಯ ಕುಟುಂಬಸ್ಥರನ್ನು ಭೇಟಿ ಮಾಡಲು ಹೊರಟಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿಯವರನ್ನು ಪೊಲೀಸರು ತಡೆಯೊಡಿದ್ದರು. ಇದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಕೆಲಕಾಲ ಧರಣಿ ನಡೆಸಿದ್ದರಿಂದ ಉದ್ವಿಘ್ನ ವಾತಾವರಣ ನಿರ್ಮಾಣವಾಗಿತ್ತು.

ಪೊಲೀಸರು ಏನೇ ಮಾಡಲಿ ನಾವು ಹೆದರುವುದಿಲ್ಲ. ನಾವು ಮಾನವೀಯತೆ ದೃಷ್ಟಿಯಿಂದ ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಲು ಹೊರಟಿದ್ದೇವೆ. ಆದರೆ ಪೊಲೀಸರು ನಮ್ಮನ್ನಾಕೆ ತಡೆದಿದ್ದಾರೆ, ಸಂತ್ರಸ್ತರನ್ನು ಭೇಟಿ ಮಾಡಲು ಬಿಡುವುದಿಲ್ಲ ಎಂದರೆ ಏನರ್ಥ.  ಯಾಕೆ ನಮ್ಮನ್ನು ಅಲ್ಲಿಗೆ ಹೋಗಲು ಬಿಡಲಿಲ್ಲ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಅವರು ಪಟ್ಟು ಹಿಡಿದಿದ್ದರು.

# ರಾಹುಲ್ ಆಕ್ರೋಶ:
ತಮ್ಮ ಸೋದರಿ ಮತ್ತು ಉತ್ತರಪ್ರದೇಶ ಕಾಂಗ್ರೆಸ್ ಮಹಾಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರು ಸಂತ್ರಸ್ತರನ್ನು ಭೇಟಿ ಮಾಡಲು ತಡೆಯೊಡ್ಡುವ ಮೂಲಕ ರಾಜ್ಯ ಸರ್ಕಾರ ತನ್ನ ನಿರುಂಕುಶ ಆಳ್ವಿಕೆಯ ವಾಸ್ತವ ಸಂಗತಿಯನ್ನು ತೋರ್ಪಡಿಸಿದೆ ಎಂದು ಟೀಕಿಸಿದ್ದಾರೆ.

Facebook Comments