ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇರುವುದು ಸಾಬೀತಾಗಿದೆ : ಸಚಿವ ಈಶ್ವರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.6- ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಇರುವುದು ಇಂದಿನ ಮಹಾನಗರ ಪಾಲಿಕೆಯ ಫಲಿತಾಂಶದ ಚುನಾವಣೆಯಿಂದ ಸಾಬೀತಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ನವದೆಹಲಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಹ್ಯಾಟ್ರಿಕ್ ಬಾರಿಸಿದರೆ, 25 ವರ್ಷಗಳ ನಂತರ ಬೆಳಗಾವಿ ಪಾಲಿಕೆಯಲ್ಲಿ ಪೂರ್ಣ ಬಹುಮತದೊಂದಿಗೆ ಗೆಲುವು ಸಾಧಿಸಿದ್ದೇವೆ.

ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸಂಘಟನೆ ಬೆಳೆದಿದ್ದು , ಪಕ್ಷದ ಎಲ್ಲರೂ ಒಗ್ಗೂಡಿ ಕಾರ್ಯತತ್ಪರರಾಗಿದ್ದೇವೆ. ಅದರ ಫಲ ದೊರೆತಿದೆ. ಮತದಾರರು ಬಿಜೆಪಿ ಪರವಾಗಿದ್ದು, ಕಾಂಗ್ರೆಸ್ ಅನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿದರು.

ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರಭಾವ ಈ ಬಾರಿಯ ಪಾಲಿಕೆ ಚುನಾವಣೆಯ ಮೇಲೆ ಆಗಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಯೂ ಸೇರಿದಂತೆ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಎಲ್ಲಾ ನಾಯಕರ ಸಂಘಟನಾ ಶಕ್ತಿ ಗೆಲುವಿಗೆ ಕಾರಣವಾಗಿದೆ ಎಂದರು. ಪ್ರತಿಪಕ್ಷದವರು ಚುನಾವಣೆ ಬರಲಿ ತಿಳಿಯುತ್ತದೆ ಎಂದು ಟೀಕಿಸುತ್ತಿದ್ದರು. ನಮ್ಮ ಪಕ್ಷದ ವಿರುದ್ಧ ಅಪಪ್ರಚಾರ ಮಾಡಿದ್ದೂ ಇದೆ. ಈಗ ಡಿಕೆಶಿ, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

25 ವರ್ಷಗಳ ನಂತರ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಪ್ರಥಮ ಬಾರಿಗೆ ಚಿಹ್ನೆಯೊಂದಿಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದೇವೆ. ಪ್ರಾಂತ್ಯ , ಭಾಷೆ ಇವೆಲ್ಲಕ್ಕಿಂತಲೂ ಮುಖ್ಯವಾಗಿ ರಾಷ್ಟ್ರೀಯ ವಿಚಾರಕ್ಕೆ ಅಲ್ಲಿಯ ಜನ ಬೆಂಬಲಿಸಿದ್ದಾರೆ. ನಮಗೆ ಸಂತಸ ತಂದಿದೆ ಎಂದು ಹೇಳಿದರು. ಗುಲ್ಬರ್ಗದಲ್ಲಿನ ಫಲಿತಾಂಶಕ್ಕೆ ಅಲ್ಲಿನವರೆಗೆ ಸಚಿವ ಸ್ಥಾನ ನೀಡದಿರುವುದು ಕಾರಣವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವ ಸ್ಥಾನ ನೀಡುವುದಕ್ಕೂ , ಚುನಾವಣೆಗೂ ಫಲಿತಾಂಶಕ್ಕೂ ಯಾವುದೇ ಸಂಬಂಧವಿಲ್ಲ. ಜನ ಯಾರು ಆಡಳಿತ ಮತ್ತು ಸಂಘಟನೆಯ ಮೂಲಕ ಚೆನ್ನಾಗಿ ಕೆಲಸ ಮಾಡುತ್ತಾರೆ. ಅವರನ್ನು ಗಮನಿಸುತ್ತಾರೆ. ಅದೇ ರೀತಿ ಜನ ನಮ್ಮನ್ನು ಮೆಚ್ಚಿದ್ದಾರೆ ಎಂದರು.

ಕೇಂದ್ರ ನಾಯಕರ ಅಭಿಪ್ರಾಯಕ್ಕೆ ನಾವು ಸದಾ ಬದ್ಧರಾಗಿರುತ್ತೇವೆ. ಬಿಜೆಪಿಯಲ್ಲಿ ಯಾವುದೇ ಅಪಸ್ವರವಿಲ್ಲ. ಮೋದಿಯವರು ರಾಮ. ಅಮಿತ್ ಶಾ ಲಕ್ಷ್ಮಣ ಇದ್ದ ಹಾಗೆ. ಈ ರಾಮ-ಲಕ್ಷ್ಮಣರ ನೇತೃತ್ವದಲ್ಲಿ ರಾಜ್ಯದ ಎಲ್ಲಾ ನಾಯಕರು ಒಗ್ಗೂಡಿ ಕೆಲಸ ಮಾಡುತ್ತೇವೆ. ರಾಜ್ಯದಲ್ಲಿ ಈವರೆಗೂ ನಾಲ್ಕು ಬಾರಿ ಬಿಜೆಪಿ ಅಧಿಕಾರ ಹಿಡಿದರೂ ಒಮ್ಮೆಯೂ ಪೂರ್ಣ ಬಹುಮತ ಸಾಧಿಸಿಲ್ಲ. ಹಾಗಾಗಿ ಪೂರ್ಣ ಬಹುಮತ ಪಡೆಯಲು ಸಂಘಟಿತರಾಗಿ ಕೆಲಸ ಮಾಡುತ್ತೇವೆ ಎಂದರು.

ಈ ನಿಟ್ಟಿನಲ್ಲಿ ಕೇಂದ್ರ ವರಿಷ್ಠರು ಮಾಡುವ ತೀರ್ಮಾನವನ್ನು ನಾವು ಸ್ವೀಕರಿಸಿ ಕೆಲಸ ನಿರ್ವಹಿಸುತ್ತೇವೆ. ನಾಲ್ಕು ಜನ ಸಚಿವರ ನೇಮಕ ವಿಚಾರದಲ್ಲೂ ಕೇಂದ್ರ ನಾಯಕರದೇ ಅಂತಿಮ ತೀರ್ಮಾನ ಎಂದು ತಿಳಿಸಿದರು.

ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಾಯಕತ್ವದ ಬಗ್ಗೆ ಕೇಳಿದ ಪ್ರಶ್ನೆಗೆ ಖುಷಿ ತಂದಿದೆ ಎಂದು ಉತ್ತರಿಸಿದ ಅವರು, ಅವರ ನೇತೃತ್ವದಲ್ಲಿ ರಾಜ್ಯದ ಅನೇಕ ಕೆಲಸಗಳು ಆಗುತ್ತಿವೆ. ಜಾರಿಗೊಂಡಿರುವ ಯೋಜನೆಗಳಿಗೆ ಹೆಚ್ಚಿನ ಬೆಂಬಲವನ್ನು ನೀಡುತ್ತಿದ್ದಾರೆ. ಸುವರ್ಣ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಅಮೃತ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಸಿಕ್ಕ ಸಮಯದಲ್ಲಿ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Facebook Comments