ರಂಗೇರಿದ ಪ್ರೊ ಕಬಡ್ಡಿ: ಡೆಲ್ಲಿ v/s ಬೆಂಗಳೂರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.13- ಪ್ರೊ ಕಬಡ್ಡಿಯ 8ರ ಆವೃತ್ತಿಯಲ್ಲಿ ಇಂದು ಬೆಂಗಳೂರು ಬುಲ್ಸ್ ಹಾಗೂ ದಬಾಂಗ್ ಡೆಲ್ಲಿ ವಿರುದ್ಧ ಪೈಪೋಟಿ ನಡೆಯುತ್ತಿದ್ದು ಈ ಪಂದ್ಯವನ್ನು ನಾಯಕರಾದ ಪವನ್‍ಶೆರಾವತ್ ಹಾಗೂ ನವೀನ್‍ಕುಮಾರ್‍ರ ನಡುವಿನ ಜಿದ್ದಾಜಿದ್ದಿನ ಪಂದ್ಯವೆಂದೇ ಬಿಂಬಿಸಬಹುದು.

ಅಜೇಯ ಓಟವನ್ನು ಮುಂದುವರೆಸಿದ್ದ ಬುಲ್ಸ್ ಹಾಗೂ ದಬಾಂಗ್ ತಂಡಗಳು ಕಳೆದ ಪಂದ್ಯಗಳಲ್ಲಿ ಕ್ರಮವಾಗಿ ಯುಪಿ ಯೋಧಾ ಹಾಗೂ ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧ ಸೋಲು ಕಂಡಿದ್ದರೂ ಕೂಡ ಇಂದು ನಡೆಯಲಿರುವ ಪಂದ್ಯದಲ್ಲಿ ಎರಡು ತಂಡಗಳು ಗೆಲುವಿಗಾಗಿ ಪೈಪೋಟಿ ನಡೆಸಲಿದ್ದು ಈ ಪಂದ್ಯವು ರೋಚಕತೆಯಿಂದ ಕೂಡಿರಲಿದೆ.

# ದಬಾಂಗ್ ಡೆಲ್ಲಿಯೇ ಬಲಿಷ್ಠ:
ಪ್ರೊ ಕಬಡ್ಡಿ ಆರಂಭವಾದಾಗಿನಿಂದಲೂ ನವೀನ್‍ಕುಮಾರ್ ಸಾರಥ್ಯದ ದಬಾಂಗ್ ಡೆಲ್ಲಿ ಹಾಗೂ ಪವನ್‍ಕುಮಾರ್ ಸಾರಥ್ಯದ ಬೆಂಗಳೂರು ಬುಲ್ಸ್ ತಂಡಗಳು ಪರಸ್ಪರ 14 ಬಾರಿ ಮುಖಾಮುಖಿಯಾಗಿದ್ದು ಬೆಂಗಳೂರು ಬುಲ್ಸ್ ತಂಡವು 5 ಪಂದ್ಯಗಳಲ್ಲಿ ಗೆಲುವು ಸಾಸಿದ್ದರೆ, ದಬಾಂಗ್ ತಂಡವು 8ರಲ್ಲಿ ಜಯ ಸಾಧಿಸಿದ್ದು, ಒಂದು ಪಂದ್ಯವು ರೋಚಕ ಟೈ ಕಂಡಿದೆ.

# ನವೀನ್ ವರ್ಸಸ್ ಪವನ್:
ಪ್ರೊ ಕಬಡ್ಡಿಯ ಸ್ಟಾರ್ ರೈಡರ್‍ಗಳೆಂದೇ ಬಿಂಬಿಸಿಕೊಂಡಿರುವ ದಬಾಂಗ್ ಡೆಲ್ಲಿಯ ನವೀನ್‍ಕುಮಾರ್ ಹಾಗೂ ಬೆಂಗಳೂರು ಬುಲ್ಸ್‍ನ ಪವನ್‍ಕುಮಾರ್ ಶೆರಾವತ್‍ರ ರೈಡಿಂಗ್ ನೋಡುವುದೇ ರೋಚಕ. ಈ ಇಬ್ಬರು ಆಟಗಾರರು ಪೈಪೋಟಿ ಬಿದ್ದಂತೆ ಎದುರಾಳಿ ಕೋರ್ಟ್‍ನಲ್ಲಿರುವ ಡಿಫರೆಂಡರ್‍ಗಳನ್ನು ವಂಚಿಸಿ ರೈಡಿಂಗ್ ಹಾಗೂ ಬೋನಸ್ ಪಾಯಿಂಟ್ ಕದಿಯುವಲ್ಲಿ ನಿಸ್ಸೀಮರು.

ಪ್ರೊ ಕಬಡ್ಡಿ 8ರಲ್ಲೂ ಈ ಇಬ್ಬರು ಆಟಗಾರರ ನಡುವೆಯೇ ಪೈಪೋಟಿ ಇದ್ದು ನವೀನ್‍ಕುಮಾರ್ ಇದುವರೆಗೂ 130 ಪಾಯಿಂಟ್ ಗಳಿಸಿದ್ದರೆ, ಪವನ್ 95 ಅಂಕಗಳನ್ನು ಗಳಿಸಿದ್ದು ಶತಕದತ್ತ ಮುನ್ನುಗ್ಗುತ್ತಿದ್ದಾರೆ.
ಈ ಹಿಂದಿನ ಪಂದ್ಯದ ಸೋಲಿನ ಕಹಿಯನ್ನು ಮರೆತು ಎರಡು ತಂಡಗಳು ಗೆಲುವು ಸಾಧಿಸುವ ಮೂಲಕ ಟಾಪ್ 1ಗೇರುವತ್ತ ಚಿತ್ತ ಹರಿಸಿದ್ದಾರೆ.

# ಇಂದಿನ ಪಂದ್ಯಗಳು
ಹರಿಯಾಣ ಸ್ಟೀಲರ್ಸ್ v/s ಯುಪಿ ಯೋಧಾ ಸಮಯ: ರಾತ್ರಿ 7.30
ದಬಾಂಗ್ ಡೆಲ್ಲಿ v/s ಬೆಂಗಳೂರು ಬುಲ್ಸ್ ಸಮಯ: ರಾತ್ರಿ 8.30

Facebook Comments