ನಿರ್ಮಾಪಕ ಸ್ಟಿಲ್ ಸೀನು ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.3- ಅಪಘಾತದಿಂದಾಗಿ ಕೋಮಾ ಸ್ಥಿತಿಗೆ ಹೋಗಿದ್ದ ಚಂದನವನದ ನಿರ್ಮಾಪಕ ಹಾಗೂ ನಿರ್ದೇಶಕ ಸ್ಟಿಲ್ ಸೀನು ಚಿಕಿತ್ಸೆ ಫಲಿಸದೆ ಇಂದು ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.

ಗಹನ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದ ಸ್ಟಿಲ್ ಸೀನು ಕೆಲವು ದಿನಗಳ ಹಿಂದೆ ನಡೆದ ಅಪಘಾತದಲ್ಲಿ ತಲೆಗೆ ತೀವ್ರವಾದ ಪೆಟ್ಟು ಬಿದ್ದಿದ್ದರಿಂದ ಕೋಮಾ ಸ್ಥಿತಿಗೆ ಹೋಗಿದ್ದರು. ಅಂದಿನಿಂದಲೂ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಸಾವನ್ನಪ್ಪಿದ್ದಾರೆ.

ಪಾರ್ವತಮ್ಮ ರಾಜ್‍ಕುಮಾರ್ ಅವರು ತಮ್ಮ ವಜ್ರೇಶ್ವರಿ ಕಂಬೈನ್ಸ್‍ನಡಿ ನಿರ್ಮಾಣ ಮಾಡಿದ್ದ ರಾಘವೇಂದ್ರರಾಜ್‍ಕುಮಾರ್ ಹಾಗೂ ಮಾಲಾಶ್ರೀ ಅಭಿನಯದ ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಸ್ಥಿರ ಛಾಯಾಗ್ರಾಹಕರಾಗಿ ಗುರುತಿಸಿಕೊಂಡ ಸೀನು ನಂತರ ತಮ್ಮ ವೃತ್ತಿಯಿಂದ ಸ್ಟಿಲ್ ಸೀನು ಎಂದೇ ಪ್ರಸಿದ್ಧರಾದರು.

ಡಾ.ರಾಜ್‍ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಿವರಾಜ್‍ಕುಮಾರ್ ಸೇರಿದಂತೆ ಹಲವು ಸ್ಟಾರ್ ನಟರುಗಳ ಚಿತ್ರಗಳಿಗೆ ಸ್ಟಿಲ್ ಪೋಟೋಗ್ರಾಫರ್ ಆಗಿ ಕೆಲಸ ಮಾಡಿದ್ದ ಸ್ಟಿಲ್ ಸೀನು ಅವರು ಕೊನೆಯ ಬಾರಿಗೆ ಚಾಲೆಂಜಿಂಗ್ ಸ್ಟಾರ್ ಅಭಿನಯದ 50ನೇ ಚಿತ್ರವಾದ ಮುನಿರತ್ನ ಕುರುಕ್ಷೇತ್ರಕ್ಕೆ ಸ್ಥಿರ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದರು.

ಸ್ಟಿಲ್ ಸೀನು ಅವರ ನಿಧನಕ್ಕೆ ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷ ಜಯರಾಜ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಸ್ಟಿಲ್ ಸೀನು ಅವರ ಅಂತ್ಯಕ್ರಿಯೆ ಇಂದು ಸಂಜೆ ಯಶವಂತಪುರದಲ್ಲಿ ನಡೆಯಲಿದೆ ಎಂದು ಅವರ ಕುಟುಂಬವರ್ಗದವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

Facebook Comments