ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರನಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.25- ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಪುತ್ರ ಸ್ನೇಹಿತ್ ಸೇರಿದಂತೆ ಇತರ 8 ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ನೋಟಿಸ್ ನೀಡಿದ್ದಾರೆ. ಹಲ್ಲೆ ಹಾಗೂ ನಿಂದನೆ ಪ್ರಕರಣ ದಾಖಲಾಗುತ್ತಿದ್ದಂತೆ ಎಲ್ಲರೂ ಮನೆ ಖಾಲಿ ಮಾಡಿ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದು, ವಿಚಾರಣೆಗೆ ಹಾಜರಾಗುವಂತೆ ಮನೆಗೆ ನೋಟಿಸ್ ತಲುಪಿಸಿದ್ದಾರೆ.

ಶನಿವಾರ ಸಂಜೆ ಮಹಾಲಕ್ಷ್ಮಿ ಲೇಔಟ್‍ನ 8ನೆ ಮುಖ್ಯರಸ್ತೆ ನಿವಾಸಿ, ಉದ್ಯಮಿ ಪುರುಷೋತ್ತಮ್ ಎಂಬುವವರ ಮನೆ ಕೆಲಸದಾಕೆ ಅನುರಾಧಾ ಎಂಬುವವರು ಕಸ ಗುಡಿಸುತ್ತಿದ್ದರು. ಆ ವೇಳೆ ಎದುರು ಮನೆ ನಿವಾಸಿ ಸೌಂದರ್ಯ ಜಗದೀಶ್ ಅವರ ಪುತ್ರ ಸ್ನೇಹಿತ್ ಅವರಿಗೆ ಧೂಳು ಹಾರುತ್ತದೆ, ಪಕ್ಕಕ್ಕೆ ಹೋಗಿ ಎಂದು ಅನುರಾಧಾ ಹೇಳುತ್ತಿದ್ದಂತೆ ಅವರೊಂದಿಗೆ ಜಗಳವಾಡಿದ್ದಾರೆ.

ಜಗಳ ವಿಕೋಪಕ್ಕೆ ತಿರುಗಿದಾಗ ಸ್ನೇಹಿತ್ ಹಾಗೂ ಆತನ ಗೆಳೆಯರು ಅನುರಾಧಾ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಘಟನೆಗೆ ಸಂಬಂಸಿದಂತೆ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇದೀಗ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸ್ನೇಹಿತ್ ಹಾಗೂ ಇತರರಿಗೆ ನೋಟಿಸ್ ನೀಡಿದ್ದಾರೆ.

ಪ್ರಕರಣ ಸಂಬಂಧ ಕೆಲವು ನಿರ್ಮಾಪಕರು ಪುರುಷೋತ್ತಮ್ ಮನೆಯವರಿಗೆ ದೂರವಾಣಿ ಕರೆ ಮಾಡಿ ಅವರಿಗೆ ರಾಜಿ ಮಾಡಿಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ ಎಂಬ ವಿಚಾರ ತಿಳಿದುಬಂದಿದೆ.

Facebook Comments