ಬೆಂಗಳೂರಿಗರೇ ಗಮನಿಸಿ : ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡರೆ ಸ್ಥಿರಾಸ್ತಿ ಜಪ್ತಿ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.21- ನಗರದಲ್ಲಿ ಆಸ್ತಿ ತೆರಿಗೆ ಪಾವತಿಸಲು ವಿಳಂಬ ಮಾಡುತ್ತಿರುವವರ ವಿರುದ್ಧ ಬ್ರಹ್ಮಾಸ್ತ್ರ ಬಳಸಲು ಬಿಬಿಎಂಪಿ ಮುಂದಾಗಿದೆ. ಇನ್ನು ಮುಂದೆ ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸದ ಹಾಗೂ ತಪ್ಪು ಮಾಹಿತಿ ನೀಡುವವರ ಆಸ್ತಿ ಜಪ್ತಿ ಮಾಡುವ ಕುರಿತಂತೆ ಕೆಎಂಸಿ ಕಾಯ್ದೆಗೆ ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ.

ಈಗಾಗಲೇ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಆಡಳಿತಗಾರ ಗೌರವ್ ಗುಪ್ತ ಅವರಿಗೆ ಕಾಯ್ದೆಗೆ ತಿದ್ದುಪಡಿ ತರುವಂತೆ ಮನವಿ ಮಾಡಿಕೊಂಡಿದ್ದು, ಪಾಲಿಕೆಯ ಈ ತೀರ್ಮಾನಕ್ಕೆ ಸರ್ಕಾರದ ಅನುಮೋದನೆ ಬೇಕಾಗಿದೆ.  ಈಗಾಗಲೇ ಅಧಿವೇಶನ ಆರಂಭವಾಗಿದ್ದು, ಕೆಎಂಸಿ ಕಾಯ್ದೆ -1976ಕ್ಕೆ ತಿದ್ದುಪಡಿ ತಂದು 108ಎ ಅನ್ನು ಜಾರಿಗೊಳಿಸಲು ಸರ್ಕಾರ ಅನುಮತಿ ನೀಡಿದರೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರ ಆಸ್ತಿ ಜಪ್ತಿಯಾಗುವುದು ಗ್ಯಾರಂಟಿ.

ನಗರದಲ್ಲಿ ಎಸ್‍ಎಎಸ್ ಆಸ್ತಿ ತೆರಿಗೆ ಪದ್ಧತಿ ಜಾರಿಯಲ್ಲಿದ್ದು, ತೆರಿಗೆದಾರರು ತಮ್ಮ ಸ್ವತ್ತುಗಳನ್ನು ತಾವೇ ಘೋಷಿಸಿಕೊಂಡು ಆಸ್ತಿ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಬೇಕು. ಸುಳ್ಳು ಮಾಹಿತಿ ನೀಡಿರುವ ತೆರಿಗೆದಾರರ ಘೋಷಣೆಗಳನ್ನು ಪರಿಶೀಲಿಸಿ ನ್ಯೂನ್ಯತೆ ಕಂಡುಬಂದಲ್ಲಿ ಕೆಎಂಸಿ ಕಾಯ್ದೆಯನ್ವಯ ಆಸ್ತಿ ತೆರಿಗೆ ಪರಿಷ್ಕರಿಸಿ ವ್ಯತ್ಯಾಸದ ಮೊತ್ತಕ್ಕೆ ದುಪ್ಪಟ್ಟು ದಂಡ ಮತ್ತು ಬಡ್ಡಿ ಪಾವತಿಸುವಂತೆ ನೋಟಿಸ್ ಜಾರಿ ಮಾಡಲು ಅವಕಾಶವಿದೆ.

ಒಂದು ವೇಳೆ ತೆರಿಗೆದಾರರು ನೋಟಿಸ್ ಜಾರಿ ಮಾಡಿದ ನಂತರವೂ ತೆರಿಗೆ ಪಾವತಿಸದಿದ್ದರೆ ಆಸ್ತಿ ಜಪ್ತಿ ವಾರೆಂಟ್ ಕಾರ್ಯಗತಗೊಳಿಸಿ ಅವರ ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಇದುವರೆಗೂ ಅವಕಾಶವಿತ್ತು. ಆದರೆ, ಚರಾಸ್ತಿ ಮುಟ್ಟುಗೋಲಿನಿಂದ ಸಂಪೂರ್ಣ ಆಸ್ತಿ ತೆರಿಗೆ ಪಾವತಿಸಿಕೊಳ್ಳಲು ಅವಕಾಶ ಇಲ್ಲದಿದ್ದ ಹಿನ್ನೆಲೆಯಲ್ಲಿ ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇರಬೇಕು ಎಂಬ ಒತ್ತಾಯ ಹೆಚ್ಚಾಗಿತ್ತು.

ನಗರದಲ್ಲಿ ಸಾವಿರಾರು ಕಟ್ಟಡ ಮಾಲೀಕರು ಸಮರ್ಪಕ ಆಸ್ತಿ ತೆರಿಗೆ ಪಾವತಿಸದೆ ವಂಚಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಕೆಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ನೀಡಬೇಕು ಎಂದು ಆಡಳಿತಗಾರರ ಮುಂದೆ ಟಿಪ್ಪಣಿ ಸಲ್ಲಿಸಿದ್ದಾರೆ.

ಆಯುಕ್ತರ ಈ ಟಿಪ್ಪಣಿಗೆ ಸರ್ಕಾರದ ಅನುಮೋದನೆ ದೊರೆತರೆ ಇನ್ನು ಮುಂದೆ ತೆರಿಗೆ ವಂಚಕರ ಚರ ಸ್ವತ್ತಿನ ಜತೆಗೆ ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಲಭಿಸಿದಂತಾಗುತ್ತದೆ. ಇದರ ಜತೆಗೆ ಕಂದಾಯ ಇಲಾಖೆಯಲ್ಲಿ ಬೇಕಾಬಿಟ್ಟಿ ಕೆಲಸ ಮಾಡುತ್ತಿರುವ ಅಧಿಕಾರಿ ಮತ್ತು ನೌಕರರಿಗೂ ಆಯುಕ್ತರು ಬಿಸಿ ಮುಟ್ಟಿಸಿದ್ದು, ಇನ್ನು ಮುಂದೆ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಪ್ರಕರಣಗಳನ್ನು ಇತ್ಯರ್ಥಗೊಳಿಸುವುದು ಕಡ್ಡಾಯವಾಗಿರುತ್ತದೆ.

ಇನ್ನು ಮುಂದೆ ನಿಯಮಾನುಸಾರ ಪರಿಶೀಲಿಸಿ ಕ್ರಮ ವಹಿಸಿ ಎಂದು ಟಿಪ್ಪಣಿ ಬರೆಯಲು ಅವಕಾಶ ನೀಡುವುದಿಲ್ಲ. ಹೀಗಾಗಿ ಯಾವುದೇ ಪ್ರಸ್ತಾವನೆಯನ್ನು ಮೇಲಧಿಕಾರಿಗಳಿಗೆ ಮಂಡಿಸುವ ಮುನ್ನ ಈ ಸುತ್ತೋಲೆಯನ್ನು ಗಂಭೀರವಾಗಿ ಪರಿಗಣಿಸಿ ಅನುಮೋದಿಸಿದೆ ಇಲ್ಲವೆ ತಿರಸ್ಕರಿಸಿದೆ ಎಂದು ಸ್ಪಷ್ಟವಾಗಿ ನಮೂದಿಸುವಂತೆ ಆಯುಕ್ತರು ಕಂದಾಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Facebook Comments