ಹಣ ಮಂಜೂರಾತಿಗಾಗಿ ಬಿಬಿಎಂಪಿ ಗುತ್ತಿಗೆದಾರರ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.23- ಕಳೆದ 25 ತಿಂಗಳಿಂದ ಕಾಮಗಾರಿಗಳ ಹಣ ಮಂಜೂರು ಮಾಡಿಲ್ಲ ಎಂದು ಗುತ್ತಿಗೆದಾರರು ಇಂದು ಬಿಬಿಎಂಪಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಕೊರೊನಾ ಸಂಕಷ್ಟ ಇರುವುದರಿಂದ ನಾವು ಮಾಡಿರುವ ಸಾಲ ತೀರಿಸಲು ಸಾಧ್ಯವಾ ಗುತ್ತಿಲ್ಲ. ಎಷ್ಟೇ ಮನವಿ ಮಾಡಿದರೂ ನಮಗೆ ಹಣ ಬಿಡುಗಡೆಯಾಗುತ್ತಿಲ್ಲ. ಲಂಚ ನೀಡಿದವರಿಗೆ ಮಾತ್ರ ಅಕಾರಿಗಳು ಬಿಲ್ ಪಾವತಿ ಮಾಡುತ್ತಿದ್ದಾರೆ.

ಕೂಡಲೇ ಹಣ ಬಿಡುಗಡೆ ಮಾಡದಿದ್ದಲ್ಲಿ ಕಾಮಗಾರಿಗಳನ್ನು ಸ್ಥಗಿತ ಮಾಡುತ್ತೇವೆ ಎಂದು ಪ್ರತಿ ಭಟನಾ ನಿರತ ಗುತ್ತಿಗೆದಾರರು ಎಚ್ಚರಿಕೆ ನೀಡಿದರು.
ಗುತ್ತಿಗೆದಾರರನ್ನು ನಂಬಿಕೊಂಡು ಸಾವಿರಾರು ಕೂಲಿ ಕಾರ್ಮಿಕರು, ಸಾಮಗ್ರಿಗಳ ಮಾರಾಟಗಾರರು ಇದ್ದು, ಹಣ ಬಿಡುಗಡೆಯಾಗದೆ ಇರುವುದರಿಂದ ಅವರೆಲ್ಲ ಬೀದಿಗೆ ಬಂದಿದ್ದಾರೆ ಎಂದು ಸಂಘದ ಅಧ್ಯಕ್ಷ ಮಂಜುನಾಥ್ ಹೇಳಿದರು.

ನಮ್ಮ ಹಣದ ಮೇಲೆ ಅಕಾರಿಗಳು ಸವಾರಿ ಮಾಡುತ್ತಿದ್ದಾರೆ. ಎರಡು ವರ್ಷಗಳಿಂದಲೂ ಒಂದೂ ಬಿಲ್ ನೀಡಿಲ್ಲ. ನಾವೆಲ್ಲ ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೊರೊನಾ ಸಂದರ್ಭದಲ್ಲೂ ಅಕಾರಿಗಳ ಭ್ರಷ್ಟಾಚಾರ ಮಿತಿಮೀರಿದೆ. ಕಾಮಗಾರಿ ನಂಬಿಕೊಂಡು ಎರಡು ಸಾವಿರಕ್ಕೂ ಹೆಚ್ಚು ಗುತ್ತಿಗೆದಾರರಿದ್ದೇವೆ. ಬೇಡಿಕೆಗೆ ಸ್ಪಂದಿಸದಿದ್ದರೆ ವಾಹನ ತಡೆದು ಪ್ರತಿಭಟನೆ ಮಾಡುತ್ತೇವೆ. ಪ್ರತಿ ಬಾರಿ ದಸರಾ ಹಬ್ಬಕ್ಕೆ ಬಿಲ್ ಬಿಡುಗಡೆಯಾಗುತ್ತಿತ್ತು.

ಇತಿಹಾಸದಲ್ಲಿ ಇದೇ ಮೊದಲ ಬಾರಿ ಬಿಡಿಗಾಸನ್ನೂ ಕೊಟ್ಟಿಲ್ಲ. ಅತಿ ಹೆಚ್ಚು ಬಿಲ್ ಆಗಿರುವ ಕಾಮಗಾರಿಗೆ ಲಂಚ ಪಡೆದು ಹಣ ನೀಡಿ ಸೀನಿಯಾರಿಟಿ ಬಿಲ್ ನೀಡುವ ನಿಯಮಾವಳಿಗಳನ್ನು ಅಕಾರಿಗಳು ಸ್ಪಷ್ಟವಾಗಿ ಉಲ್ಲಂಘನೆ ಮಾಡಿದ್ದಾರೆ. ಯಾರೂ ಹೇಳುವವರು, ಕೇಳುವವರು ಇಲ್ಲದಂತಾಗಿದೆ ಎಂದು ಆರೋಪಿಸಿದರು.

Facebook Comments