‘ಮುಷ್ಕರ ದೇಶದ ಪ್ರಗತಿಗೆ ಕಂಟಕ’

ಈ ಸುದ್ದಿಯನ್ನು ಶೇರ್ ಮಾಡಿ

ಸಣ್ಣ ಸಣ್ಣ ಕಾರಣಗಳಿಗೆಲ್ಲಾ ಮುಷ್ಕರ ಹೂಡುವುದು ಭಾರತದಲ್ಲಿ ಒಂದು ಮಹಾ ವ್ಯಾಧಿಯಾಗಿ ಪರಿಣಮಿಸಿರುವುದು ದೇಶದ ಪ್ರಗತಿಗೆ ಕಂಟಕವಾಗಿದೆ ಎಂದು ಹೇಳಲು ಅಡ್ಡಿಯಿಲ್ಲ. ಉನ್ನತ ಅಧಿಕಾರಿಗಳಿಂದ ಆರಂಭಿಸಿ ತಾತ್ಕಾಲಿಕ ನೌಕರರವರೆಗೆ, ವಿಮಾನಚಾಲಕರಿಂದ ಹಿಡಿದು, ಗಾಡಿ ತಳ್ಳುವವರವರೆಗೆ ಎಲ್ಲರೂ ಸಂಪು ಹೂಡಲು ಸದಾಸನ್ನದ್ದರಾಗಿ ನಿಂತಿರುವುದನ್ನು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಾಣಬಹುದಾಗಿದೆ. ಮುಷ್ಕರ ಹೂಡಲು ತಾವು ಆಶ್ರಯಿಸಿರುವ ಕಾರಣ ಅರ್ಹವೇ, ಯೋಗ್ಯವೇ, ಅವಶ್ಯಕವೇ, ಅಲ್ಲವೇ, ಮುಷ್ಕರ ಹೂಡುವುದೇ ಅನಿವಾರ್ಯ ಮಾರ್ಗವೇ, ಈ ಮುಷ್ಕರದ ಪರಿಣಾಮ ನಮಗೂ ಇತರರಿಗೂ ಹಿತಕರವೇ, ಇತ್ಯಾದಿಗಳನ್ನು ನಾವು ಯೋಚಿಸುತ್ತಿರುವಂತೆ ಕಾಣುತ್ತಿಲ್ಲ.

ರಸ್ತೆಯಂಚಿನಲ್ಲಿ ಚಲಿಸುವ ಅಂಗಡಿಗಳವರು ಫುಟ್‍ಪಾತ್‍ನಲ್ಲಿ ತಮ್ಮ ಹಕ್ಕನ್ನು ಸ್ಥಿರಗೊಳಿಸಲು ಮುಷ್ಕರ, ಹೋಟೆಲ್ ತಿಂಡಿ, ಸಿನಿಮಾನಲ್ಲಿ ನೀರಿನ ದರಗಳ ಬಗ್ಗೆ ಮುಷ್ಕರ, ಬಸ್ಸು, ರೈಲು, ಬ್ಯಾಂಕ್, ವಿಮಾ ಇತ್ಯಾದಿ ಕಛೇರಿಗಳ ನೌಕರರ ಮುಷ್ಕರ ನೀರಿಲ್ಲವೆಂದು ಖಾಲಿ ಕೊಡ ಹೊತ್ತು ಹೊರಟ ಸ್ತ್ರೀಯರ ಮುಷ್ಕರ ಇವೆಲ್ಲವನ್ನೂ ನೋಡಿದಾಗ ಜೇಬುಗಳ್ಳರೆಲ್ಲ ಸೇರಿ ತಾವು ಅಹಿಂಸಾತ್ಮಕವಾಗಿ ತಮ್ಮ ವೃತ್ತಿ ಪಾಲನೆಯಲ್ಲಿ ನಿರತರಾಗಿರಲು ಪೊಲೀಸರು ಅಡ್ಡ ಬರುವುದನ್ನು ಪ್ರತಿಭಟಿಸಿ ಮುಷ್ಕರ ಹೂಡುವ ದಿನಗಳು ದೂರವಿಲ್ಲ ಎಂಬುದು ಭಾಸವಾಗುತ್ತಿದೆ.

ಮಹಾತ್ಮಾ ಗಾಂಧೀಜಿಯವರು ಸತ್ಯಾಗ್ರಹ ಎಂಬ ಸಸಿಯನ್ನು ಪ್ರಪ್ರಥಮವಾಗಿ ನೆಟ್ಟರು. ಇಂದು ಈ ಸಸಿ ನಾನಾ ಕವಲೊಡೆದು ಬೃಹತ್ ವೃಕ್ಷವಾಗಿರುವುದನ್ನು ಅವರೇ ಕಣ್ಣಿನಿಂದ ಕಂಡಿದ್ದರೆ, ನಗುತ್ತಿದ್ದರೋ, ಅಳುತ್ತಿದ್ದರೋ ಹೇಳುವುದು ಕಷ್ಟ.
ಒಂಭತ್ತು ವಯಸ್ಸು ದಾಟಿದವರು ನಮ್ಮ ರಾಷ್ಟ್ರದಲ್ಲಿ ಸುಮಾರು 44 ಕೋಟಿ. ಇವರೆಲ್ಲ ಒಂದಲ್ಲ ಒಂದು ವಿಧದಲ್ಲಿ ಮುಷ್ಕರದಲ್ಲಿ ಧುಮುಕಲು ಹಾತೊರೆಯುತ್ತಿರುವಂತೆ ಕಾಣುತ್ತಿದೆ.

ಮುಷ್ಕರ ಹೂಡಲು ತರಬೇತಿಯನ್ನು, ಈಗ ಶಿಕ್ಷಣದ ವೇಳೆಯಲ್ಲಿಯೇ ಎಲ್ಲರೂ ಅನಿವಾರ್ಯವಾಗಿ ಪಡೆದುಕೊಳ್ಳುತ್ತಿರುವಂತೆ ತೋರುತ್ತಿದೆ. ಶಾಲೆಯಲ್ಲಿ ಸಾಕಷ್ಟು ಅಧ್ಯಾಪಕರುಗಳಿಲ್ಲ, ಇರುವ ಅಧ್ಯಾಪಕರು ಸರಿಯಾಗಿ ಪಾಠ ಮಾಡುತ್ತಿಲ್ಲ, ಪ್ರಾಂಶುಪಾಲರು ಅಥವಾ ಮುಖ್ಯೋಪಾಧ್ಯಾಯರು ಕೆಲವು ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಂಡಿದ್ದಾರೆ, ಶುಲ್ಕ ಜಾಸ್ತಿಯಾಯಿತು, ಪರೀಕ್ಷೆಗಳನ್ನು ಮುಂದೂಡಬೇಕು, ಇತ್ಯಾದಿ ನೂರಾರು ಕಾರಣ ಸೃಷ್ಟಿಸಿ, ವಿದ್ಯಾರ್ಥಿ ನಾಯಕರು ಮಿತ್ರರಿಗೆಲ್ಲಾ ಮುಷ್ಕರದ ದೀಕ್ಷೆಯನ್ನು ನೀಡುತ್ತಾರೆ.

ಪ್ರತಿ ವರ್ಷ ಉಳಿದ ಪಾಠಗಳು ನಡೆಯಲಿ ಬಿಡಲಿ, ಮುಷ್ಕರದ ಪಾಠವಂತೂ ಎರಡು-ಮೂರು ಬಾರಿ ನಡೆದೇ ನಡೆಯುತ್ತದೆ. ಹೀಗೆ ಪಡೆದ ತರಬೇತಿಯನ್ನು ವಿದ್ಯಾರ್ಥಿ ಮುಂದಿನ ತನ್ನ ಜೀವನದಲ್ಲಿ ಸದುಪಯೋಗ ಪಡಿಸಿಕೊಳ್ಳದಿದ್ದರೆ ಹೇಗೆ ? ಮುಂದೆ ಅವನು ಸರ್ಕಾರಿ ನೌಕರನಾಗಲಿ, ವಾಹನ ಚಾಲಕನಾಗಲಿ, ಕಾರ್ಖಾನೆಯ ಕಾರ್ಮಿಕನಾಗಲಿ ಮುಷ್ಕರವನ್ನು ಮಾಡದೆ ಬಿಡುವುದಿಲ್ಲ. ಅವನಿಗೆ ಕಾರಣ ಮುಖ್ಯವಲ್ಲ. ಮುಷ್ಕರ ಮುಖ್ಯ. ಮುಷ್ಕರ ನಡೆಸಲು ತೀರ್ಮಾನಿಸಿ ಅನಂತರ ಕಾರಣವನ್ನು ಹುಡುಕುವ ಸಂದರ್ಭಗಳೂ ಇಲ್ಲದೇ ಇಲ್ಲ. ಮುಷ್ಕರ ಪರಿಣತರನ್ನು ಕೋರಿದರೆ, ಅವರು ಅದೆಲ್ಲವನ್ನು ಸಮರ್ಪಕವಾಗಿ ಮತ್ತು ಸಮರ್ಥವಾಗಿ ಸಿದ್ಧಪಡಿಸಿಕೊಡುತ್ತಾರೆ.

ಹೀಗೆಂದ ಮಾತ್ರಕ್ಕೆ ಎಲ್ಲ ಕಡೆಯೂ ಮುಷ್ಕರ ಅನ್ಯಾಯವೆಂದಾಗಲಿ, ಮುಷ್ಕರಕ್ಕೆ ಅದನ್ನು ಹೂಡುವವರೇ ಕಾರಣವೆಂದಾಗಲಿ ಅಭಿಪ್ರಾಯವಲ್ಲ.ಅಧಿಕಾರ ಸೂತ್ರಗಳನ್ನು ಹಿಡಿದಿರುವವರು ನ್ಯಾಯವಿರುದ್ಧವಾಗಿ ನಡೆದಾಗ, ಮಾತುಕತೆಗಳ ಮೂಲಕ ವಿವಾದವನ್ನು ಬಗೆಹರಿಸಲು ಒಪ್ಪದಿದ್ದಾಗ, ಪ್ರತಿಭಟಿಸಲು ಬೇರೆ ಮಾರ್ಗವಿಲ್ಲದಿದ್ದಾಗ, ಮುಷ್ಕರವನ್ನು ನಡೆಸಬೇಕಾದೀತು. ಆದರೆ, ಅದು ಕೊನೆಯದಾಗಿ ಪ್ರಯೋಗಿಸಬೇಕಾದ ಬ್ರಹಾಸ್ತ್ರ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು.

ಈ ಕೊನೆಯ ಅಸ್ತ್ರವನ್ನು ಪ್ರಯೋಗಿಸಲು ಪ್ರಚೋದನೆಯನ್ನು ಅಧಿಕಾರಿಗಳಾಗಲಿ, ಮಾಲೀಕರಾಗಲಿ, ತಮ್ಮ ಅಜ್ಞಾನ, ಪ್ರತಿಷ್ಠೆ, ತಿರಸ್ಕಾರ, ಅಹಂಕಾರಗಳ ಮೂಲಕ ನೀಡಬಾರದು. ಗಲಾಟೆ, ಮುಷ್ಕರ, ಹಿಂಸಾಚಾರಗಳು ನಡೆಯದಿದ್ದರೆ, ಬೇಡಿಕೆಗಳ ಬಗೆಗೆ ಗಮನವನ್ನು ಯಾರೂ ನೀಡುವುದಿಲ್ಲ ಎಂಬ ಭಾವನೆ ಈಗ ಈ ದೇಶದಲ್ಲಿ ಬೇರೂರಿದೆ. ಇದು ಹೋಗುವಂತೆ ಅಧಿಕಾರಸ್ಥರು ಪ್ರಾಮಾಣಿಕವಾಗಿ ಪ್ರಯತ್ನ ಶೀಲರಾಗಬೇಕು. ಮುಷ್ಕರದಿಂದ ಆಗುವ ಕಷ್ಟನಷ್ಟಗಳನ್ನು ಗಮನಿಸಿ ಅವುಗಳಿಂದ ಎಲ್ಲರೂ ದೂರವಿರಬೇಕು. ಆಗಲೇ ದೇಶದ ಹಿತ ಸಾಧ್ಯ ಎಂಬುದನ್ನು ಯಾರೂ ಮರೆಯಬಾರದು. ಕವಿಯ ಒಂದು ಮಾತನ್ನವಲೋಕಿಸಿದಾಗ:
ಮತಿ ನಯನದಂತೆ ಮುದಿರ್ಪುದನು ನೋಡುವುದು
ಮಿತವದರ ಕೆಲಸ ಹೆಳವನ ಚಲನೆಯಂತೆ
ಗತಿಶಕ್ತಿಯದಕೆ ಮನವೆಂಬ ಚರಣದ ಬಲದೆ
ಮತಿಬಿಟ್ಟ ಮನ ಕುರಡು ; ಎನ್ನುವಂತೆ.

ನಮ್ಮ ಬುದ್ದಿಬಲವನ್ನು ಒಳ್ಳೆಯದಕ್ಕೆ ಮಾತ್ರ ಸೀಮಿತವಾಗಿರಿಸುವ ದಿಸೆಯಲ್ಲಿ ನಾವು ಪ್ರಯತ್ನಶೀಲರಾಗಬೇಕು. ಒಟ್ಟಿನಲ್ಲಿ ಜನತೆಯ ಅಸ್ಪಷ್ಟ, ಅವ್ಯಕ್ತ ಆದರ್ಶ ಮತ್ತು ಧ್ಯೇಯಗಳಿಗೆ ಒಂದು ರೂಪು ನೀಡಿ, ಅವರ ಸಂಶಯಗಳನ್ನು ನಿವಾರಿಸಿ, ಮಾನವೀಯ ಭಾವೈಕ್ಯತೆಯನ್ನು ಸತ್‍ಪ್ರೇರಣೆಯ ಮೂಲಕ ಪ್ರಕಾಶಗೊಳಿಸುವ ಹಿರಿಯರ ಆದರ್ಶಗಳು ನಮ್ಮ ದಾರಿದೀವಿಗೆಯನ್ನಾಗಿಸುವ ಮೂಲಕ, ಇಂತಹ ಮುಷ್ಕರಗಳ ಅವಲೋಕನವಾಗಬೇಕು. ತನ್ಮೂಲಕ ಮಾತ್ರ ಇದು ಅರ್ಥಪೂರ್ಣವಾದೀತು.

ಚಿಂತನ ಚೈತನ್ಯಗಳು
ಆಕಾಶವಾಣಿಯಲ್ಲಿ ಪ್ರಸಾರವಾದ ವಿದ್ವಾನ್ ಡಾ.ಎಂ.ಶಿವಕುಮಾರ ಸ್ವಾಮಿ ವಿರಚಿತ ಪ್ರಬಂಧಗಳು ಈ ಸಂಜೆ ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಿದೆ.

Facebook Comments