ರಾಜ್ಯೋತ್ಸವ ಆಚರಿಸಿದ ನೌಕರರ ವಜಾ : ಐಟಿಸಿ ಕಂಪೆನಿ ವಿರುದ್ಧ  ಕನ್ನಡ ಸಂಘಟನೆಗಳ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.16-ಐಟಿಸಿ ಕಂಪನಿಯಲ್ಲಿ ಕನ್ನಡಿಗರಿಗೆ ಹೆಚ್ಚು ಉದ್ಯೋಗಾವಕಾಶ ಕಲ್ಪಿಸಬೇಕು, ಕೆಲಸದಿಂದ ತೆಗೆದು ಹಾಕಿರುವ ನವೀನ್ ಅವರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸಿ ಕನ್ನಡ ಪರ ಸಂಘಟನೆಗಳು ಬಾಣಸವಾಡಿಯಲ್ಲಿ ಭಾರೀ ಪ್ರತಿಭಟನೆ ನಡೆಸಿದವು. ಪ್ರತಿಭಟನೆಗೂ ಮುನ್ನ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೇರಿದಂತೆ ನೂರಾರು ಮಂದಿ ಬೈಕ್ ರ್ಯಾಲಿ ನಡೆಸಿದರು.

ಬಾಣಸವಾಡಿಯಲ್ಲಿರುವ ಐಟಿಸಿ ಕಂಪನಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿ ಕನ್ನಡಿಗರಿಗೆ ಯಾವುದೇ ಕಾರಣಕ್ಕೂ ಅವಮಾನ ಮಾಡಕೂಡದು ಎಂದು ಆಗ್ರಹಿಸಿದರು. ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿದರೆಂಬ ಕಾರಣಕ್ಕೆ ಐಟಿ ಉದ್ಯೋಗಿ ನವೀನ್ ಮಲ್ಲೇನಹಳ್ಳಿ ಎಂಬುವರನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಇದನ್ನು ಖಂಡಿಸಿ ಮತ್ತು ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶ ನೀಡಬೇಕೆಂದು ಆಗ್ರಹಿಸಿ ಇಂದು ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ಐಟಿಸಿ ಕಂಪನಿಗೆ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿತ್ತು. ಪ್ರತಿಭಟನೆಗೆ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು, ಪ್ರವೀಣ್‍ಕುಮಾರ್‍ಶೆಟ್ಟಿ ಸಾಥ್ ನೀಡಿದರು. ಕರವೇ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದರಿಂದ ಆಕ್ರೋಶಗೊಂಡ ಪ್ರತಿಭಟನಾ ಕಾರರು ರಸ್ತೆ ಮಧ್ಯೆಯೇ ಕುಳಿತು ಧಿಕ್ಕಾರ ಕೂಗಲಾರಂಭಿಸಿದರು.

ಹಾಗಾಗಿ ಈ ಭಾಗದಲ್ಲಿ ಬಹಳ ಸಮಯ ಟ್ರಾಫಿಕ್ ಜಾಮ್ ಆಗಿತ್ತು. ಪ್ರತಿಭಟನೆ ವಿಷಯ ತಿಳಿದು ಐಟಿಸಿ ಕಂಪನಿಯ ಜನರಲ್ ಮ್ಯಾನೇಜರ್ ಕೋದಂಡ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿದರು. ಕನ್ನಡಿಗರಿಗೆ ಹೆಚ್ಚು ಉದ್ಯೋಗ ಕೊಡಬೇಕು, ನವೀನ್‍ನನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.

ಈ ವೇಳೆ ಪ್ರವೀಣ್‍ಕುಮಾರ್ ಶೆಟ್ಟಿ, ವಾಟಾಳ್ ನಾಗರಾಜ್ ಮಾತನಾಡಿ, ಯಾವುದೇ ಕಾರಣಕ್ಕೂ ಕನ್ನಡಿಗರ ಮೇಲೆ ದಬ್ಬಾಳಿಕೆ ಆಗುವುದನ್ನು ಸಹಿಸುವುದಿಲ್ಲ. ಕನ್ನಡ ವಿರೋಧಿ ಧೋರಣೆ ಕಂಡರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಇದೇ ವೇಳೆ ಕೆಲವು ಪ್ರತಿಭಟನಾಕಾರರನ್ನು ಪೆÇಲೀಸರು ವಶಕ್ಕೆ ಪಡೆದಿದ್ದಾರೆ.

Facebook Comments