ಸಾರಿಗೆ ನೌಕರರ ಬಿಗಿ ಪಟ್ಟು, ಸರ್ಕಾರ ಮೌನ : ಶೇ.8ರಷ್ಟು ವೇತನ ಹೆಚ್ಚಳ ಫೈನಲ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.9- ನೀವು ಎಷ್ಟು ದಿನ ಬೇಕಾದರೂ ಮುಷ್ಕರ ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ನಿಮ್ಮ ಜೊತೆ ಸಂಧಾನ ಇಲ್ಲವೇ ಮಾತುಕತೆ ನಡೆಸುವುದಿಲ್ಲ.ಸಮಸ್ಯೆಯನ್ನು ಪರಿಹರಿಸುವುದು ನಮಗೂ ಗೊತ್ತು ಎಂದು ಸರ್ಕಾರ ಪ್ರತಿಭಟನಾನಿರತರಿಗೆ ಮತ್ತೆ ಎಚ್ಚರಿಕೆ ಸಂದೇಶ ರವಾನಿಸಿದೆ. ಮಾತುಕತೆಗೆ ಬನ್ನಿ ಎಂದು ಪದೇ ಪದೇ ಕರೆದರೂ ಹಠಮಾರಿ ಧೋರಣೆ ಮುಂದುವರೆಸಿರುವ ನಿಮ್ಮೊಂದಿಗೆ ಸಂಧಾನ ನಡೆಸುವ ಯಾವುದೇ ಅಗತ್ಯವಿಲ್ಲ. ಪ್ರತಿಭಟನೆ ಹಿಂಪಡೆದು ಕರ್ತವ್ಯಕ್ಕೆ ಹಾಜರಾಗುವುದಾದರೆ ಆಗಿ, ಇಲ್ಲದಿದ್ದರೆ ಏನು ಮಾಡಬೇಕು ಎಂಬುದು ನಮಗೂ ಗೊತ್ತು ಎಂದು ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ.

ಕಳೆದ ಎರಡು ದಿನಗಳಿಂದ ಮುಷ್ಕರ ನಿರತ ಸಿಬ್ಬಂದಿಯ ಸಂಘಟನೆಗಳ ಮುಖಂಡರು ಮಾತುಕತೆಗೆ ಬರಬೇಕೆಂದು ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ, ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಬಸವರಾಜ್ ಬೊಮ್ಮಾಯಿ ಸೇರಿದಂತೆ ಮತ್ತಿತರರು ಮನವಿ ಮಾಡಿದ್ದರು. ಒಂದು ಹಂತದಲ್ಲಿ ಮುಷ್ಕರ ಕೈಬಿಡದಿದ್ದರೆ ಪ್ರತಿಭಟನಾನಿರತರ ಮೇಲೆ ಕಾನೂನು ಕ್ರಮ ಜರುಗಿಸುವುದಾಗಿ ಸರ್ಕಾರ ಎಚ್ಚರಿಕೆ ಕೊಟ್ಟಿತ್ತು. ಆದರೆ ಇದಾವುದಕ್ಕೂ ತಲೆಕೆಡಿಸಿಕೊಳ್ಳದ ಸಾರಿಗೆ ಸಿಬ್ಬಂದಿಯವರು 3ನೇ ದಿನವಾದ ಇಂದು ಕೂಡ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಇನ್ನು ಮುಂದೆ ಸಾರಿಗೆ ನೌಕರರ ಜೊತೆ ಯಾವುದೇ ಹಂತದ ಸಂಧಾನ ನಡೆಸದೆ ಕಾನೂನು ಅಸ್ತ್ರದ ಮೂಲಕ ಹಣಿಯಲು ಸಜ್ಜಾಗಿದೆ. ಈಗಾಗಲೇ ನಿನ್ನೆಯಷ್ಟೇ ತರಬೇತಿ ಹಂತದ ಕೆಲವು ನೌಕರರನ್ನು ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ವಜಾ ಮಾಡಿತ್ತು. ಇದೀಗ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ನೌಕರರನ್ನು ಹಂತ ಹಂತವಾಗಿ ಕಿತ್ತು ಹಾಕಲು ಸಜ್ಜಾಗುತ್ತಿದೆ.

# ಎಸ್ಮಾ ಜಾರಿ:
ಸಾರ್ವಜನಿಕರಿಗೆ ತೊಂದರೆ ಕೊಟ್ಟು ಪ್ರತಿಭಟನೆ ನಡೆಸುವುದು ಶಿಕಾರ್ಹ ಅಪರಾಧ ಎಂಬ ನಿಯಮವಿದೆ. ಇದನ್ನೇ ಅಸ್ತ್ರ ಮಾಡಿಕೊಂಡಿರುವ ಸರ್ಕಾರ ಕಳೆದ ಮೂರು ದಿನಗಳಿಂದ ಯಾವ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿಲ್ಲ. ಅಂಥವರನ್ನು ಎಸ್ಮಾ ಅಡಿ ಕೆಲಸದಿಂದ ವಜಾಗೊಳಿಸುವ ತೀರ್ಮಾನಕ್ಕೆ ಬಂದಿದೆ. ಪದೇ ಪದೇ ಸರ್ಕಾರಕ್ಕೆ ಬ್ಲಾಕ್‍ಮೇಲ್ ಮಾಡಿ ಮುಷ್ಕರ ನಡೆಸುತ್ತಿರುವ ಸಾರಿಗೆ ಸಿಬ್ಬಂದಿಗೆ ಈ ಬಾರಿ ತಕ್ಕ ಪಾಠ ಕಲಿಸಲೇಬೇಕೆಂಬ ದೃಢ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ.

ತರಬೇತಿ ಹಂತದ ನೌಕರರನ್ನು ವಜಾ ಮಾಡಲಾಗಿದ್ದು, ಇಂದು ಸಂಜೆಯೊಳಗೆ ಪ್ರತಿಭಟನಾನಿರತರು ಕರ್ತವ್ಯಕ್ಕೆ ಹಾಜರಾಗದಿದ್ದರೆ ಹಂತ ಹಂತವಾಗಿ ವಜಾಸ್ತ್ರ ಪ್ರಯೋಗಿಸಲು ಸರ್ಕಾರ ಸಜ್ಜಾಗುತ್ತಿದೆ. ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ ನೌಕರರು ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವೇ ಇಲ್ಲ. ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದು ಹಾಗೂ 6ನೇ ವೇತನ ಆಯೋಗವನ್ನು ತಮಗೂ ಕೂಡ ಅನುಷ್ಠಾನ ಮಾಡಬೇಕೆಂಬುದು ಸಾರಿಗೆ ಸಿಬ್ಬಂದಿಗಳ ಪ್ರಮುಖ ಬೇಡಿಕೆ.

ಇದನ್ನು ಸರ್ಕಾರ ಸುತಾರಾಂ ಒಪ್ಪುತ್ತಿಲ್ಲ. ಮೊದಲೇ ಇಲಾಖೆ ನಷ್ಟದಲ್ಲಿದೆ. ಅಂಥದ್ದರಲ್ಲಿ ನಾವು ಸಿಬ್ಬಂದಿಗೆ ಪ್ರತಿ ತಿಂಗಳು ವೇತನವನ್ನು ಕೊಡುತ್ತಿದ್ದೇವೆ. ಸರ್ಕಾರಿ ನೌಕರರೆಂದು ಪರಿಗಣಿಸುವುದು ಇಲ್ಲವೇ 6ನೇ ಆಯೋಗದ ವೇತನವನ್ನು ಜಾರಿ ಮಾಡಿದರೆ ಬೊಕ್ಕಸಕ್ಕೆ ಹೊರೆಯಾಗುತ್ತದೆ ಎಂಬ ಕಾರಣಕ್ಕಾಗಿ ಸರ್ಕಾರ ಜಗ್ಗದಿರಲು ಮುಂದಾಗಿದೆ.
ಶೇ.8ರಷ್ಟು ವೇತನ ಹೆಚ್ಚಳ ಮಾಡಲು ಸರ್ಕಾರ ತೀರ್ಮಾನಿಸಿದೆ. ಆದರೆ ಇದನ್ನು ಸಿಬ್ಬಂದಿ ಒಪ್ಪುತ್ತಿಲ್ಲ.

Facebook Comments