ಪಾಪಿ ಪಾಕ್ ಪೊಲೀಸರ ದೌರ್ಜನ್ಯಕ್ಕೆ ಇಬ್ಬರ ಸಾವು, 80 ಜನರಿಗೆ ಗಾಯ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಜಾಫರಾಬಾದ್, ಅ.23-ಗಡಿಯಲ್ಲಿ ಉಗ್ರರ ನೆಲೆಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿದ್ದನ್ನು ಸುಳ್ಳು ಎಂದು ಸಾಬೀತುಪಡಿಸಲು ಹೋಗಿ ಪಾಕಿಸ್ತಾನ ಸೇನೆ ತೀವ್ರ ಮುಜುಗರಕ್ಕೊಳಗಾದ ಪ್ರಸಂಗದೊಂದಿಗೆ ಹಿಂಸಾಚಾರದಲ್ಲಿ ಇಬ್ಬರು ಬಲಿಯಾಗಿ ಅನೇಕರು ಗಾಯಗೊಂಡಿರುವ ಘಟನೆಯೂ ನಡೆದಿದೆ. ದಾಳಿ ನಡೆದ ಸ್ಥಳಕ್ಕೆ ವಿದೇಶಿ ನಿಯೋಗವನ್ನು ಕರೆದುಕೊಂಡು ಹೋಗಿ, ಭಾರತೀಯ ಸೇನೆ ಹೇಳಿದಂತೆ ಯಾವುದೇ ದಾಳಿಗಳೂ ನಡೆದಿಲ್ಲ ಎಂದು ಪಾಕಿಸ್ತಾನ ಸೇನೆ ಸಾಬೀತು ಮಾಡಲು ಮುಂದಾಗಿತ್ತು.

ವಿದೇಶಿ ನಿಯೋಗವನ್ನು ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದಂತೆಯೇ ಸ್ಥಳೀಯ ನಿವಾಸಿಗಳು ಪಾಕಿಸ್ತಾನ ಸರ್ಕಾರ ಹಾಗೂ ಪಾಕಿಸ್ತಾನ ಸೇನೆ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಲು ಆರಂಭಿಸಿದರು. ಪ್ರತಿಭಟನೆ ವೇಳೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಪಾಕಿಸ್ತಾನ ಸೇನೆ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.

1947ರ ಅ.22 ಪಾಕಿಸ್ತಾನ ಸೇನೆ ಜಮ್ಮು ಮತ್ತು ಕಾಶ್ಮೀರದ ಕೆಲ ಭಾಗಗಳನ್ನು ಆಕ್ರಮಿಸಿದ ದಿನವಾಗಿದ್ದು, ಈ ಹಿನ್ನೆಲೆಯಲ್ಲಿ ಸ್ಥಳೀಯರು ಸ್ವಾತಂತ್ರ್ಯ ಆಗ್ರಹಿಸಿ ಪ್ರತಿಭಟನೆಗೆ ಮುಂದಾಗಿದ್ದರು. ಇದೇ ಸಂದರ್ಭದಲ್ಲಿಯೇ ವಿದೇಶಿ ನಿಯೋಗ ಭೇಟಿ ನೀಡಿದ ಹಿನ್ನೆಲೆಯಲ್ಲಿ ಉದ್ರಿಕ್ತರಾದ ಪ್ರತಿಭಟನಾಕಾರರು ಪ್ರತಿಭಟನೆಯನ್ನು ತೀವ್ರಗೊಳಿಸಿದರು.

ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಲಾಠಿಚಾರ್ಜ್ ನಡೆಸಿದ್ದು, ಈ ವೇಳೆ ಇಬ್ಬರು ಸಾವನ್ನಪ್ಪಿ, 80ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ವರದಿಗಳು ತಿಳಿಸಿವೆ.

Facebook Comments