ಕೊಲೆ ಪ್ರಕರಣ ದಾಖಲಿಸಿಕೊಂಡ ಬೆನ್ನಲ್ಲೇ ನೇಣಿಗೆ ಶರಣಾದ ಪಿಎಸ್‍ಐ..!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಜು.31- ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚನ್ನರಾಯಪಟ್ಟಣದಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡ ಪಿಎಸ್‍ಐ ಮನೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜನತೆಯನ್ನು ಬೆಚ್ಚಿಬೀಳಿಸಿದೆ.

ಕೊಲೆ ಪ್ರಕರಣ ದಾಖಲಿಸಿಕೊಂಡು ಮನೆಗೆ ತೆರಳಿದ ಚನ್ನರಾಯಪಟ್ಟಣ ನಗರ ಪೆÇಲೀಸ್ ಠಾಣೆಯ ಪಿಎಸ್‍ಐ ಕಿರಣ್‍ಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅರಸೀಕೆರೆ ತಾಲ್ಲೂಕಿನ ಗಂಡಸಿ ಹೋಬಳಿಯ ಲಾಳಿನಕೆರೆಯವರಾದ ಕಿರಣ್‍ಕುಮಾರ್ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪಿಎಸ್‍ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ತನಿಖೆ ನಂತರವಷ್ಟೇ ಸತ್ಯಾಂಶ ಹೊರಬೀಳಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ನಡೆದದ್ದೇನು? ಇಂದು ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ ಗೋ ಗ್ಯಾಸ್ ಬಳಿ ಸಂಪತ್ ಎಂಬ ಯುವಕನ ಬರ್ಬರ ಹತ್ಯೆ ನಡೆದಿತ್ತು.ನಿನ್ನೆಯಷ್ಟೆ ಹಾಸನದ ಚನ್ನರಾಯಪಟ್ಟಣ-ಬಾಗೂರು ರಸ್ತೆಯಲ್ಲಿ 25 ವರ್ಷದ ಯುವಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಇಂದು ಮತ್ತೊಬ್ಬ ಯುವಕನ ಕೊಲೆಯಾಗಿದೆ.

# ಕೊಲೆಯಾಗಿದ್ದು ಹೀಗೆ:
ಕೊಲೆಯಾದ ಸಂಪತ್ ಮತ್ತು ಶಶಿಕುಮಾರ್ ಎಂಬುವವರು ಸ್ನೇಹಿತರಾಗಿದ್ದು, ನಿನ್ನೆ ರಾತ್ರಿ ಸ್ನೇಹಿತರೊಂದಿಗೆ ಆಟೋ ಗ್ಯಾರೇಜ್‍ವೊಂದರಲ್ಲಿ ಮದ್ಯಪಾನ ಮಾಡಿರುತ್ತಾರೆ.

ಕುಡಿದು ಚಿತ್ತಾದ ನಂತರ ಸಂಪತ್‍ನನ್ನು ಶಶಿಕುಮಾರ್ ತಾನು ಕೆಲಸ ಮಾಡುತ್ತಿದ್ದ ಡಾಬಾ ಬಳಿಗೆ ಕರೆತಂದಿರುತ್ತಾನೆ. ಬರುವಾಗ ಆತನ ಜತೆಯಲ್ಲಿ ಗೊರಮಾರನಹಳ್ಳಿಯ ಹರೀಶ್ ಮತ್ತು ಮಂಜು ಎಂಬುವವರನ್ನು ಕರೆತಂದಿರುತ್ತಾನೆ.

ಸ್ನೇಹಿತರ ಜತೆ ಬಂದ ಹರೀಶ್ ಫಿರ್ಯಾದಿ ಶಶಿಕುಮಾರ್‍ನನ್ನು ಬಾರಲೋ ಇಲ್ಲಿ ಎಂದು ಏಕವಚನದಲ್ಲಿ ಕರೆದಾಗ ಇದರಿಂದ ಕುಪಿತಗೊಂಡ ಸಂಪತ್ ಹರೀಶ್ ಮೇಲೆ ಹಲ್ಲೆ ನಡೆಸಿರುತ್ತಾನೆ.

ಜಗಳವಾದ ನಂತರ ನಿನ್ನನ್ನು ಒಂದು ಕೈ ನೋಡಿಕೊಳ್ಳುತ್ತೇನೆ ಎಂದು ಹೇಳಿ ವಾಪಸ್ ಹೋಗಿರುತ್ತಾನೆ. ಇಂದು ಮುಂಜಾನೆ ಸಂಪತ್, ಶಶಿಕುಮಾರ್, ವಿನಯ್, ಶ್ರೀನಿವಾಸ್ ಎಂಬುವವರು ಹೆದ್ದಾರಿ ಸಮೀಪ ಮಾತನಾಡುತ್ತ ನಿಂತಿದ್ದಾಗ ಅಜಯ್ ಎಂಬುವವರ ಜತೆ ಬೈಕ್‍ನಲ್ಲಿ ಬಂದ ಹರೀಶ್ ಸಂಪತ್ ಜತೆ ಪುನಃ ಜಗಳ ತೆಗೆದು ಚಾಕುವಿನಿಂದ ಸಂಪತ್‍ನ ಕುತ್ತಿಗೆ ಇರಿದು ಪರಾರಿಯಾಗುತ್ತಾನೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಂಪತ್‍ನನ್ನು ಸ್ನೇಹಿತರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿರುತ್ತಾನೆ. ಈ ಕುರಿತಂತೆ ಕೊಲೆ ಪ್ರಕರಣ ದಾಖಲಿಸಿಕೊಂಡ ಪಿಎಸ್‍ಐ ಕಿರಣ್‍ಕುಮಾರ್ ಇಂದು ಬೆಳಗ್ಗೆ 9 ಗಂಟೆಗೆ ಮನೆಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಅಚ್ಚರಿ ಮೂಡಿಸಿದೆ.

ಕಿರಣ್‍ಕುಮಾರ್ ಪತ್ನಿ ವರಮಹಾಲಕ್ಷ್ಮಿ ಹಬ್ಬಕ್ಕೆಂದು ತವರಿಗೆ ತೆರಳಿದ್ದರಿಂದ ಮನೆಯಲ್ಲಿ ಯಾರೂ ಇರಲಿಲ್ಲ. ಈ ವೇಳೆ ಪಿಎಸ್‍ಐ ಫ್ಯಾನ್‍ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.

Facebook Comments

Sri Raghav

Admin