ಪಿಎಸ್ಐ ಪರೀಕ್ಷೆ ಅಕ್ರಮದ ಕಿಂಗ್ ಪಿನ್ ರುದ್ರಗೌಡನನ್ನ ಬೆಂಗಳೂರಿಗೆ ಕರೆ ತಂದ ಪೊಲೀಸರು
ಬೆಂಗಳೂರು,ಮೇ11- ಪಿಎಸ್ಐ ನೇಮಕಾತಿ ಅಕ್ರಮದ ರೂವಾರಿ ಎನ್ನಲಾದ ರುದ್ರಗೌಡ ಪಾಟೀಲ್ನನ್ನು ಬಾಡಿ ವಾರೆಂಟ್ ಮೇಲೆ ನಗರಕ್ಕೆ ಕರೆತರಲಾಗಿದೆ.
ಅನ್ನಪೂಣೇಶ್ವರಿ ನಗರ ಠಾಣೆಯ ಪೊಲೀಸ್ ತಂಡವೊಂದು ಕಲಬುರಗಿಗೆ ತೆರಳಿ ಹೆಚ್ಚಿನ ವಿಚಾರಣೆಗಾಗಿ ರುದ್ರಗೌಡ ಪಾಟೀಲ್ನನ್ನು ಕರೆತಂದಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.
ಕಳೆದ ಡಿಸೆಂಬರ್ನಲ್ಲಿ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪರೀಕ್ಷಾ ಕೇಂದ್ರವೊಂದರಲ್ಲಿ ನಡೆದಿದ್ದ ಜೆಇ, ಎಇ ಪರೀಕ್ಷೆ ಸಂದರ್ಭದಲ್ಲಿ ಅಭ್ಯರ್ಥಿಯೊಬ್ಬ ಎಲೆಕ್ಟ್ರಾನಿಕ್ ಬ್ಲೂಟೂತ್ ಬಳಸಿದ ಸಂಬಂಧ ಪ್ರಕರಣ ದಾಖಲಾಗಿತ್ತು.
ಪರೀಕ್ಷೆ ಬರೆದಿದ್ದ ಅಭ್ಯರ್ಥಿ ವಿಚಾರಣೆ ವೇಳೆ ರುದ್ರಗೌಡ ಪಾಟೀಲನ ಹೆಸರು ಹೇಳಿದ್ದನು. ಅದನ್ನು ಆಧರಿಸಿ ರುದ್ರಗೌಡನನ್ನು 7ನೇ ಆರೋಪಿಯಾಗಿ ಪರಿಗಣಿಸಲಾಗಿತ್ತು.
ಆ ಸಂದರ್ಭದಲ್ಲಿ ತನಿಖೆ ಕೈಗೊಂಡ ಪೊಲೀಸರು 14 ಮಂದಿಯನ್ನು ಬಂಸಿ, 16 ಮಂದಿ ವಿರುದ್ಧ ಪ್ರಾಥಮಿಕ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ರುದ್ರಗೌಡ ಪಾಟೀಲನನ್ನು ಬಂಧಿಸಿದ್ದರು. ಇದೀಗ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಾಡಿ ವಾರೆಂಟ್ ಮೇಲೆ ಬೆಂಗಳೂರಿಗೆ ಕರೆತಂದಿದ್ದಾರೆ.
ರುದ್ರಗೌಡ ಪಾಟೀಲ ಪ್ರಭಾವದ ಬಗ್ಗೆ ಹಲವಾರು ಊಹಾಪೋಹಗಳು ಹೊರಬೀಳುತ್ತಿವೆ. ಈತನಿಗೆ ಪ್ರಭಾವಿ ಪೊಲೀಸ್ ಅಕಾರಿಗಳು ಹಾಗೂ ರಾಜಕಾರಣಿಗಳು ಸಹಾಯ ಮಾಡಿದ್ದರಿಂದ ಅಂದು ಸಿಕ್ಕಿ ಹಾಕಿಕೊಳ್ಳದೆ ಪಾರಾಗಿದ್ದ ಎನ್ನಲಾಗಿದೆ.
ಇದೀಗ ಪಿಎಸ್ಐ ಪರೀಕ್ಷಾ ಅಕ್ರಮದ ರೂವಾರಿ ಎಂದೇ ಹೇಳಲಾಗಿರುವ ರುದ್ರಗೌಡ ಪಾಟೀಲನಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಪೊಲೀಸರು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.