ಪಿಎಸ್ಐ ಪರೀಕ್ಷಾ ಅಕ್ರಮ, 17ರಂದು ಸಿಐಡಿ ಕಚೇರಿ ಎದುರು ಧರಣಿ
ಬೆಂಗಳೂರು,ಮೇ14- ಪಿಎಸ್ಐ ಪರೀಕ್ಷಾ ಅಕ್ರಮ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಭ್ರಷ್ಟಾಚಾರದ ವಿರುದ್ಧ ನಾವು ಸಂಘಟನೆಯ ಸಹಯೋಗದಲ್ಲಿ ಸಿಐಡಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದು ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪರೀಕ್ಷಾ ಅಕ್ರಮದಲ್ಲಿ ದೊಡ್ಡವರ ಹೆಸರುಗಳು ಕೇಳಿಬರುತ್ತಿವೆ. ನೇಮಕಾತಿ ವಿಭಾಗದ ಅಧಿಕಾರಿ ಶಾಂತಕುಮಾರ್ ವಿಚಾರಣೆ ಸಂದರ್ಭದಲ್ಲಿ ಅನೇಕ ಪ್ರಭಾವಿಗಳನ್ನು ಬಂಧಿಸದಂತೆ ಒತ್ತಡ ಹೇರಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಐಪಿಎಸ್ ಅಧಿಕಾರಿಗಳು, ರಾಜಕೀಯ ನಾಯಕರನ್ನು ಇನ್ನು ವಿಚಾರಣೆ ನಡೆಸಲಾಗುತ್ತಿಲ್ಲ.
ಸಿಐಡಿ ತನಿಖೆ ಮೇಲೆ ಹೆಚ್ಚಿನ ಪ್ರಭಾವ ಮತ್ತು ಒತ್ತಡ ಇರುವುದರಿಂದ ಹಿರಿಯ ಅಧಿಕಾರಿಗಳನ್ನು ವಿಚಾರಣೆ ಮಾಡಲಾಗುತ್ತಿಲ್ಲ. ಹೀಗಾಗಿ ನಿಷ್ಪಕ್ಷಪಾತ ತನಿಖೆ ನಡೆಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರದ ವಿರುದ್ಧ ನಾವು ಸಂಘಟನೆ ಸಹಯೋಗದಲ್ಲಿ ಮೇ 17ರಂದು ಸಿಐಡಿ ಕಚೇರಿ ಎದುರು ಪಾರದರ್ಶಕ ತನಿಖೆಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.