ಪಿಎಸ್‍ಐ ಪರೀಕ್ಷಾ ಅಕ್ರಮ : ಆರೋಪಿಗಳ ಮನೆ ಮೇಲೆ ಸಿಐಡಿ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 14- ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಸಿಐಡಿ ವಶದಲ್ಲಿರುವ ಆರೋಪಿಗಳ ಮನೆಗಳ ಮೇಲೆ ತನಿಖಾ ತಂಡ ದಿಢೀರ್ ದಾಳಿ ನಡೆಸಿದೆ. ಡಿವೈಎಸ್ಪಿ ಶಾಂತಕುಮಾರ್, ನೇಮಕಾತಿ ವಿಭಾಗದ ಮಂಜುನಾಥ್, ಹರ್ಷ, ಲೋಕೇಶ್, ಶ್ರೀಧರ್ ಸೇರಿದಂತೆ ಮತ್ತಿತರ ಆರೋಪಿಗಳ ಮೇಲೆ ಬೆಂಗಳೂರು ಸೇರಿದಂತೆ ಬೇರೆ ಬೇರೆ ಭಾಗಗಳಲ್ಲಿ ಸಿಐಡಿ ತನಿಖಾ ತಂಡ ದಾಳಿ ನಡೆಸಿ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದೆ.

ದಾಳಿಯ ಸಂದರ್ಭದಲ್ಲಿ ಆರೋಪಿಗಳ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದಂತೆ ಪಾಸ್‍ಪುಸ್ತಕ, ಮೊಬೈಲ್, ಸಿಮ್ ಕಾರ್ಡ್ ಗಳು, ಹಾರ್ಡ್ ಡಿಸ್ಕ್, ಪೆನ್‍ಡ್ರೈವ್, ಸಿ.ಡಿ ಸೇರಿದಂತೆ ಮತ್ತಿತರ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ. ಜೊತೆಗೆ ಈ ಆರೋಪಿಗಳು ಸಂಬಂಧಿಕರ ಮನೆಗಳಲ್ಲಿ ಕೆಲವು ರಹಸ್ಯ ದಾಖಲೆಗಳನ್ನು ಸಂಗ್ರಹಿಸಿಟ್ಟಿದ್ದರು ಎಂಬ ಶಂಕೆ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.

ವಿಚಾರಣಾ ಸಂದರ್ಭದಲ್ಲಿ ಆರೋಪಿಗಳು ತನಿಖಾ ತಂಡದ ಎದುರು ತಾವು ಎಲ್ಲೆಲ್ಲಿ, ಯಾವಯಾವ ದಾಖಲೆಗಳನ್ನು ಸಂಗ್ರಹಿಸಿಟ್ಟಿದ್ದೆವು ಎಂಬುದನ್ನು ಬಾಯಿಬಿಟ್ಟಿದ್ದರು. ಇವರ ಹೇಳಿಕೆ ಕೊಟ್ಟ ಆಧಾರದ ಮೇಲೆಯೇ ಸಿಐಡಿ ದಾಳಿ ನಡೆಸಿದೆ.

Facebook Comments