ಸಂಸತ್ತಿನಲ್ಲಿ ಪ್ರತಿಧ್ವನಿಸಿದ ಪಿಎಸ್‍ಯು ಖಾಸಗೀಕರಣ : ಉಭಯ ಸದನಗಳಲ್ಲಿ ಕೋಲಾಹಲ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ನ.21-ಚುನಾವಣಾ ಬಾಂಡ್‍ಗಳು ಮತ್ತು ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ(ಪಿಎಸ್‍ಯುಗಳು) ಖಾಸಗೀಕರಣ ವಿಷಯಗಳು ಸಂಸತ್ತಿನ ಉಭಯ ಸದನಗಳಲ್ಲೂ ಇಂದು ಪ್ರತಿಧ್ವನಿಸಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಸದಸ್ಯರು ಭಾರೀ ಪ್ರತಿಭಟನೆ ನಡೆಸಿದ್ದರಿಂದ ಗದ್ದಲ-ಕೋಲಾಹಲದ ವಾತಾವರಣ ಸೃಷ್ಟಿಯಾಯಿತು. ಇದೇ ಕಾರಣಕ್ಕಾಗಿ ರಾಜ್ಯಸಭೆ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.

ಸಂಸತ್ತಿನ ಚಳಿಗಾಲದ ಅಧಿವೇಶನದ ನಾಲ್ಕನೇ ದಿನದ ಕಲಾಪ ಲೋಕಸಭೆಯಲ್ಲಿ ಇಂದು ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಚುನಾವಣಾ ಬಾಂಡ್‍ಗೆ ಆರ್‍ಬಿಐ ಆಕ್ಷೇಪಣೆ ಮತ್ತು ಸಾರ್ವಜನಿಕ ವಲಯ ಘಟಕಗಳ(ಪಿಎಸ್‍ಯುಗಳ) ಬಂಡವಾಳ ಹಿಂತೆಗೆತದ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಸ್ತಾಪಿಸಿ ಈ ವಿಷಯಗಳ ಚರ್ಚೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು.

ಕಾಂಗ್ರೆಸ್ ಸದಸ್ಯರು ಸಭಾಧ್ಯಕ್ಷ ಪೀಠದ ಮುಂದಿನ ಸ್ಥಳಕ್ಕೆ(ಸದನ ಬಾವಿ) ಘೋಷಣೆಗಳನ್ನು ಕೂಗಿ ಧರಣಿ ನಡೆಸಿದರು. ಭಾರತ್ ಪೆಟ್ರೋಲಿಯಂ ಕಾಪೆರ್ರೇಷನ್ ಲಿಮಿಟೆಡ್(ಬಿಪಿಸಿಎಲ್) ಸೇರಿದಂತೆ ಪಿಯುಎಸ್‍ಗಳ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದು ದೊಡ್ಡ ಹಗರಣ. ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಸ್ಪೀಕರ್ ಅವರನ್ನು ಆಗ್ರಹಿಸಿದರು.

ಪ್ರಶ್ನೋತ್ತರ ಕಲಾಪದಲ್ಲಿ ಕ್ರೀಡಾ ಪಟುಗಳಿಗೆ ಸಂಬಂಧಿಸಿದ ಮಹತ್ವದ ವಿಷಯಗಳ ಚರ್ಚೆಗಳು ನಡೆಯುತ್ತಿವೆ. ಸದನದ ಬಾವಿಯೊಳಗೆ ಪ್ರತಿಭಟನೆ ನಡೆಸುವುದು ಸರಿಯಲ್ಲ. ನಿಮ್ಮ ಸ್ಥಾನಗಳಿಗೆ ಹಿಂದಿರುಗಿ, ಶೂನ್ಯ ವೇಳೆಯಲ್ಲಿ ಈ ಬಗ್ಗೆ ಚರ್ಚೆಗೆ ಖಂಡಿತ ಅವಕಾಶ ನೀಡುವುದಾಗಿ ಸಭಾಧ್ಯಕ್ಷ ಓಂ ಬಿರ್ಲಾ ಭರವಸೆ ನೀಡಿದ ನಂತರ ಪ್ರತಿಭಟನಾನಿರತ ಕಾಂಗ್ರೆಸ್ ಸದಸ್ಯರು ತಮ್ಮ ಆಸನಗಳತ್ತ ತೆರಳಿದರು.

ಮೇಲ್ಮನೆ ಮುಂದೂಡಿಕೆ : ಇದೇ ವಿಷಯವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿ ಭಾರೀ ಗದ್ದಲ ಸೃಷ್ಟಿಸಿದ್ದರಿಂದ ಸಂಸತ್ತಿನ ಮೇಲ್ಮನೆ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.

ಸಂಸತ್ತಿನ ಚಳಿಗಾಲದ ಅಧಿವೇಶನದ ನಾಲ್ಕನೇ ದಿನದ ಕಲಾಪ ರಾಜ್ಯಸಭೆಯಲ್ಲಿ ಇಂದು ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಸದಸ್ಯರು, ಚುನಾವಣಾ ಬಾಂಡ್‍ಗೆ ಆರ್‍ಬಿಐ ಆಕ್ಷೇಪಣೆ ಮತ್ತು ಸಾರ್ವಜನಿಕ ವಲಯ ಘಟಕಗಳ(ಪಿಎಸ್‍ಯುಗಳ) ಬಂಡವಾಳ ಹಿಂತೆಗೆತದ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಸ್ತಾಪಿಸಿ ಈ ವಿಷಯಗಳ ಚರ್ಚೆಗೆ ಅವಕಾಶ ನೀಡಬೇಕೆಂದು ಸಭಾಪತಿ ಡಾ. ಎಂ.ವೆಂಕಯ್ಯ ನಾಯ್ಡು ಅವರನ್ನು ಆಗ್ರಹಿಸಿದರು.

ಕಲಾಪವನ್ನು ಅಮಾನತುಗೊಳಿಸಿ ಈ ವಿಷಯಗಳ ಬಗ್ಗೆ ಚರ್ಚೆಗೆ ಹಲವು ಸದಸ್ಯರು ನೋಟಿಸ್‍ಗಳನ್ನು ನೀಡಿದ್ದಾರೆ. ಆದರೆ ಈಗಾಗಲೇ ನೋಟಿಸ್ ನೀಡಲಾಗಿರುವ ಇತರ ಮಹತ್ವದ ವಿಚಾರಗಳ ಚರ್ಚೆಯನ್ನು ರದ್ದುಗೊಳಿಸಿ ಅನ್ಯ ವಿಷಯಗಳನ್ನು ಈಗ ಚರ್ಚಿಸಲು ಸಾಧ್ಯವಿಲ್ಲ ಎಂದು ನಾಯ್ಡು ತಿಳಿಸಿದರು.  ಇದರಿಂದ ಕುಪಿತಗೊಂಡ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಸದಸ್ಯರು ಪ್ರತಿಭಟನೆ ಮುಂದುವರಿಸಿದಾಗ ಸಭಾಪತಿಯವರು ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.

Facebook Comments