ಪಬ್ ಜೀ ಗೇಮ್‍ಗೆ ಹುಚ್ಚಿಗೆ ತಂದೆಯನ್ನೇ ತುಂಡರಿಸಿ ಪಾಪಿ ಪುತ್ರ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ,ಸೆ.9- ಪಬ್‍ಜೀ ಗೇಮ್ ವ್ಯಸನಿಯಾಗಿದ್ದ ಮಗನೊಬ್ಬ, ಬುದ್ಧಿವಾದ ಹೇಳಿದ ತಂದೆಯನ್ನೇ ತುಂಡು-ತುಂಡಾಗಿ ಕತ್ತರಿಸಿ ಕೊಲೆಗೈದಿರುವ ಬೀಭತ್ಸ ಘಟನೆ ಇಂದು ಬೆಳಗ್ಗೆ ತಾಲೂಕಿನ ಕಾಕತಿಯ ಸಿದ್ದೇಶ್ವರ ನಗರದಲ್ಲಿ ನಡೆದಿದ್ದು ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ.

ಸಿದ್ದೇಶ್ವರ ನಗರದ ನಿವಾಸಿ ಶಂಕ್ರೆಪ್ಪಾ ಕುಂಬಾರ(60) ಹೆತ್ತ ಮಗನಿಂದಲೇ ಕೊಲೆಯಾದ ದುರ್ದೈವಿ. ರಘುವೀರ ಕುಂಬಾರ(25) ತಂದೆಯನ್ನು ಕೊಲೆಗೈದ ಕ್ರೂರಿ ಮಗ. ಶಂಕ್ರೆಪ್ಪಾ ಕುಂಬಾರ ನಿವೃತ್ತ ಸಶಸ್ತ್ರ ಪಡೆಯಲ್ಲಿ ಪೋಲಿಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ 3 ತಿಂಗಳ ಹಿಂದೆಯಷ್ಟೇ ಸೇವೆಯಿಂದ ನಿವೃತ್ತಿಗೊಂಡಿದ್ದರು.

ಇವರ ಮಗ ರಘುವೀರ ಸದಾ ಮೊಬೈಲ್‍ನಲ್ಲೇ ಮಗ್ನನಾಗಿರುತ್ತಿದ್ದ. ಇದನ್ನು ಕಂಡು ಬುದ್ದಿವಾದ ಹೇಳಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಗ ಅಕ್ಕಪಕ್ಕದವರ ಮನೆಯ ಕಿಟಕಿ ಗಾಜುಗಳನ್ನು ಒಡೆದು ರಂಪಾಟ ಕೂಡ ಮಾಡಿದ್ದಾನೆ. ನೆರೆಹೊರೆಯರು ಪೋಲಿಸ್ ಠಾಣೆಗೆ ಈ ಸಂಬಂಧ ದೂರು ನೀಡಿದ್ದಾರೆ. ನಂತರ ರಘುವೀರ ಮತ್ತು ಅವರ ಪಾಲಕರನ್ನು ಕರೆಸಿದ ಪೊಲೀಸರು ಆತನಿಗೆ ಬುದ್ದಿವಾದ ಹೇಳಿ ಕಳುಹಿಸಿದ್ದಾರೆ.

ಆದರೆ ಮನೆಗೆ ತೆರಳಿದ ರಘುವೀರ್ ರಾತ್ರಿ 12 ಗಂಟೆಯಾದರೂ ಮತ್ತೆ ಮೊಬೈಲ್ ಗೇಮ್‍ನಲ್ಲೇ ಮಗ್ನನಾಗಿದ್ದನು. ಇದನ್ನು ಕಂಡು ತಂದೆ ಬೈದಿದ್ದಾರೆ. ನಂತರ ಮಲಗಿದ ಆತ, ಇಂದು ಬೆಳಗ್ಗೆ 5 ಗಂಟೆಗೆ ತನ್ನ ತಾಯಿಯನ್ನು ಮತ್ತೊಂದು ರೂಮಿನಲ್ಲಿ ಕೂಡಿ ಹಾಕಿ ಕೈಗೆ ಸಿಕ್ಕ ಈಳಿಗೆ ಮಣೆಯಿಂದ ತಂದೆಯನ್ನು ಇರಿದಿದ್ದಾನೆ.

ನಂತರ ಕೆಳಗೆ ಬಿದ್ದ ತಂದೆ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ತಲೆ ಮತ್ತು ಕಾಲು ಬೇರ್ಪಡಿಸಿದ್ದಾನೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡರೂ ನಾನು ಇನ್ನು ನನ್ನ ತಂದೆಯನ್ನು ಕತ್ತರಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ.

ತಕ್ಷಣ ಕಾಕತಿ ಪಿಐ ಶ್ರೀಶೈಲ ಕೌಜಲಗಿ ಸ್ಥಳಕ್ಕಾಗಮಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ವಿಷಯ ತಿಳಿದ ಎಸಿಪಿ ಶಿವಾರೆಡ್ಡಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಘಟನೆಯ ವಿವರ ಪಡೆದಿದ್ದು, ಹೆಚ್ಚಿನ ತನಿಖೆ ನಡೆಸಿದ್ದಾರೆ.

Facebook Comments