ಈ ಬಾರಿ ಪಿಯು ಪರೀಕ್ಷಾ ಕೊಠಡಿಗಳಲ್ಲಿ 24 ಗಂಟೆಯೂ ಸಿಸಿ ಟಿವಿ ಕಣ್ಗಾವಲು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆಗಳನ್ನು ಕಟ್ಟುನಿಟ್ಟಾಗಿ ನಡೆಸುವ ನಿಟ್ಟಿನಲ್ಲಿ ಈ ಬಾರಿ ಪ್ರಶ್ನೆಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ಸುರಕ್ಷಿತ ರವಾನೆ ಮತ್ತು ಸಂರಕ್ಷಣೆ ದೃಷ್ಟಿಯಿಂದ ರಾಜ್ಯಮಟ್ಟದಲ್ಲಿ ವಿಶೇಷ ವಿಚಕ್ಷಣೆಯೊಂದಿಗೆ ಜಿಲ್ಲಾ ಮಟ್ಟದಲ್ಲೂ ನಿಯಂತ್ರಣ ಕೊಠಡಿಗಳಲ್ಲಿ ಸಿಸಿ ಟಿವಿ ಮೂಲಕ 24 ಗಂಟೆಯೂ ನಿರಂತರವಾಗಿ ನಿಗಾವಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

ಪದವಿ ಪೂರ್ವ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಬುಧವಾರ ಶ್ರೀ ರೇಣುಕಾಚಾರ್ಯ ಕಾನೂನು ಕಾಲೇಜು ಸಭಾಂಗಣದಲ್ಲಿ ನಡೆದ ಬೆಂಗಳೂರು ವಿಭಾಗದ ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಮತ್ತು ಸೂಪರಿಟೆಂಡೆಂಟ್ಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪರೀಕ್ಷೆ ಕೆಲಸಗಳಿಗೆ ನಿಯೋಜಿತರಾದ ಪ್ರತಿಯೊಬ್ಬರೂ ಮಕ್ಕಳ ಹಿತದೃಷ್ಟಿಯಿಂದ ಪರೀಕ್ಷಾ ಪಾವಿತ್ರ್ಯತೆ ಕಾಪಾಡಲು ಸಹಕರಿಸಬೇಕು ಎಂದರು.

ಪರೀಕ್ಷಾ ಕೇಂದ್ರಗಳಲ್ಲಿ ಮುಖ್ಯ ಅಧೀಕ್ಷಕರು ಮಾತ್ರವೇ ಒಂದು ಬೇಸಿಕ್ ಮೊಬೈಲ್ ಸೆಟ್ ಬಳಸಲು ಅವಕಾಶವಿದ್ದು, ಇತರರಿಗೆ ಮೊಬೈಲ್ ಸೆಟ್ ನಿಷೇಧ ಮಾಡಲಾಗಿದೆ. ವಿಶೇಷ ರಕ್ಷಣಾ ಲಕ್ಷಣಗಳೊನ್ನೊಳಗೊಂಡ 40 ಪುಟಗಳ ಉತ್ತರಪತ್ರಿಕೆಗಳನ್ನು ಈಗಾಗಲೇ ಸರಬರಾಜು ಮಾಡಲಾಗಿದೆ. ಈ ಬಾರಿ ಪರೀಕ್ಷೆಗೆ ಅನುಭವಿ ಪ್ರಾಚಾರ್ಯರುಗಳನ್ನು ಮುಖ್ಯಅಧೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ.

ಪರೀಕ್ಷಾ ಕೊಠಡಿ ಮೇಲ್ವಿಚಾರಕರು ಸೇರಿದಂತೆ ಪರೀಕ್ಷಾ ಕೆಲಸಗಳಲ್ಲಿ ತೊಡಗಿದವರಿಗೆ ಪರೀಕ್ಷಾ ಗುರುತಿನ ಚೀಟಿ ನೀಡಲಾಗುತ್ತದೆ. ಗುರುತಿನ ಚೀಟಿ ಹೊಂದಿದವರನ್ನೊರತುಪಡಿಸಿ ಯಾರಿಗೂ ಪರೀಕ್ಷಾ ಕೇಂದ್ರದೊಳಗೆ ಇಲ್ಲವೇ ಪರೀಕ್ಷಾ ಕೇಂದ್ರದ ಸುತ್ತಮುತ್ತ ಅವಕಾಶಗಳಿರುವುದಿಲ್ಲ ಎಂದು ಸಚಿವರು ಹೇಳಿದರು.

ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷಾ ಸಾಮಗ್ರಿ ರವಾನೆ ಮತ್ತು ಪರೀಕ್ಷಾ ಕೇಂದ್ರಗಳಿಂದ ಸಂಬಂಧಿಸಿದ ಮೌಲ್ಯಮಾಪನ ಕೇಂದ್ರಕ್ಕೆ ಉತ್ತರಪತ್ರಿಕೆ ರವಾನೆಯ ವಾಹನಗಳ ಚಲನವಲನಗಳ ಮೇಲೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾಗುವ ವಿಚಕ್ಷಣಾ ಕೇಂದ್ರದಿಂದಲೇ ವೀಕ್ಷಣೆ ಹಾಗೂ ನಿಯಂತ್ರಣ ಮಾಡಲಾಗುತ್ತದೆ ಎಂದರು.

ಬೆಂಗಳೂರು ವಿಭಾಗದ 10 ಶೈಕ್ಷಣಿಕ ಜಿಲ್ಲೆಗಳಿಗೆ ಸಂಬಂಧಿಸಿದ ಅಧೀಕ್ಷಕರು ಮತ್ತು ಸೂಪರಿಟೆಂಡೆಂಟ್ ಗಳ ತರಬೇತಿ ಶಿಬಿರದಂತೆಯೇ ಉಳಿದ ಮೂರು ಕಂದಾಯ ವಿಭಾಗಗಳಲ್ಲೂ ಶಿಬಿರ ನಡೆಸಲಾಗುವುದು ಮತ್ತು ಇದೇ 14ರಂದು ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಮುಖ್ಯಸ್ಥರು, ಪೊಲೀಸ್ ಆಯುಕ್ತರು, ಖಜಾನಾಧಿಕಾರಿಗಳು ಮತ್ತು ಪಿಯು ಉಪನಿರ್ದೇಶಕರೊಂದಿಗೆ ವಿಡಿಯೋ ಕಾನ್ಫೆರೆನ್ಸ್ ನಡೆಸಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

ಈಗಾಗಲೇ ಪೊಲೀಸ್ ಮಹಾನಿರ್ದೇಶಕರು ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸುಗಮ ಪರೀಕ್ಷಾ ನಿರ್ವಹಣೆಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಚರ್ಚಿಸಲಾಗಿದೆ ಎಂದರು ಅವರು ಹೇಳಿದರು.

ಪಿಯು ಪರೀಕ್ಷಗೆ ರಾಜ್ಯದಲ್ಲಿ ಒಟ್ಟು 1016 ಪರೀಕ್ಷಾ ಕೇಂದ್ರಗಳಿದ್ದು, 6,80,000 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. 2,17,000 ವಿಜ್ಞಾನ, 2,61,000 ವಾಣಿಜ್ಯ, 2,01,000 ಕಲಾ ವಿಭಾಗದಲ್ಲಿ ಪರೀಕ್ಷಾರ್ಥಿಗಳಿದ್ದಾರೆ. ಈಗಾಗಲೇ ಹಾಲ್ ಟಿಕೆಟ್ ಗಳನ್ನು ಒದಗಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ತಮ್ಮ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತಮ್ಮತಮ್ಮ ಪರೀಕ್ಷಾ ಕೇಂದ್ರಗಳಿಂದ ಯಾವುದೇ ರೀತಿಯಲ್ಲೂ ಒಂದೇ ಒಂದು ದೂರು ಬಾರದಂತೆ ಪರೀಕ್ಷಾ ಕಾರ್ಯಗಳನ್ನು ನಿರ್ವಹಿಸಬೇಕು. ನಾನು ಶಿಕ್ಷಣ ಸಚಿವನಾಗಿ ಮಕ್ಕಳೊಂದಿಗೆ ಮಾತನಾಡುವಾಗ ಮಕ್ಕಳು, ಪ್ರಶ್ನೆ ಪತ್ರಿಕೆ ಸೋರಿಕೆ, ಮೌಲ್ಯಮಾಪನದಲ್ಲಾಗುವ ತೊಂದರೆ ಮತ್ತು ನಕಲು ತಡೆಯ ಕುರಿತೇ ನನ್ನನ್ನು ಕೇಳುತ್ತಿದ್ದಾರೆ. ಮಕ್ಕಳ ಈ ಮೂರು ಕೋರಿಕೆಗಳು ಪರೀಕ್ಷೆಗಳ ಪಾವಿತ್ರವನ್ನೇ ಬಯಸುವುದರಿಂದ ಪ್ರತಿಯೊಬ್ಬರೂ ಈ ಕುರಿತು ಹೆಚ್ಚಿನ ಗಮನ ಹರಿಸಬೇಕು ಎಂದರು.

ಪದವಿ ಪೂರ್ವ ಇಲಾಖೆ ನಿರ್ದೇಶಕಿ ಎಂ. ಕನಗವಲ್ಲಿ ಸೇರಿದಂತೆ ಪಿಯು ಮಂಡಳಿಯ ಹಿರಿಯ ಅಧಿಕಾರಿಗಳು, ಉಪನಿರ್ದೇಶಕರು ಭಾಗವಹಿಸಿದ್ದರು. ಎಚ್.ವಿ. ಉಷಾ ದೇವಿ ಸ್ವಾಗತಿಸಿದರು.

Facebook Comments

Sri Raghav

Admin