ಪಿಯುಸಿಯಲ್ಲಿ 509 ಅಂಕ ಗಳಿಸಿದರೂ ವಿದ್ಯಾರ್ಥಿನಿ ಫೇಲ್..!
ಬೆಂಗಳೂರು, ಮೇ 8-ಪರೀಕ್ಷಾ ಮಂಡಳಿಯ ಯಡವಟ್ಟಿನಿಂದಾಗಿ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಮಾನಸಿಕ ಖಿನ್ನತೆಗೆ ಒಳಗಾಗಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ನಾಗವಾರದಲ್ಲಿರುವ ಖಾಸಗಿ ಶಾಲೆ ವಿದ್ಯಾರ್ಥಿನಿ ಶಾಲಿನಿ ಖಿನ್ನತೆಗೊಳಗಾಗಿದ್ದಾಳೆ.
ಪಿಯುಸಿ ಪರೀಕ್ಷಾ ಫಲಿತಾಂಶ ಬಂದಾಗ ಆಕೆಗೆ 509 ಅಂಕಗಳು ಬಂದಿದ್ದರೂ, ಫೇಲ್ ಎಂದು ನಮೂದಿಸಲಾಗಿತ್ತು. ಜೊತೆಗೆ ಕನ್ನಡದಲ್ಲಿ ಕೇವಲ 17 ಅಂಕ ಕೊಡಲಾಗಿತ್ತು. ಇದನ್ನು ನೋಡುತ್ತಿದ್ದಂತೆ ವಿದ್ಯಾರ್ಥಿನಿ ನೊಂದು ಮಾನಸಿಕ ಖಿನ್ನತೆಗೆ ಒಳಗಾದಳು.
ಆಕೆಯ ತಂದೆ ಅನ್ಬು ಪರೀಕ್ಷಾ ಮಂಡಳಿಗೆ ಪತ್ರ ಬರೆದು ಕನ್ನಡ ಉತ್ತರ ಪತ್ರಿಕೆಯ ನಕಲು ಪ್ರತಿಯನ್ನು ತರಿಸಿಕೊಂಡು ನೋಡಿದಾಗ ಮೌಲ್ಯಮಾಪಕರ ಎಡವಟ್ಟು ಗೊತ್ತಾಗಿದೆ. ದ್ವಿತೀಯ ಭಾಷೆ ಕನ್ನಡದಲ್ಲಿ 75 ಅಂಕ ಪಡೆದಿದ್ದರೂ ಕಣ್ತಪ್ಪಿನಿಂದ 17 ಅಂಕಗಳನ್ನು ಕೊಡಲಾಗಿತ್ತು. ಕನ್ನಡದಲ್ಲಿ 75 ಅಂಕ ಗಳಿಸಿದರೂ ಮೌಲ್ಯಮಾಪಕರು 17 ಅಂಕ ಮಾತ್ರ ನೀಡಿದ್ದಾರೆ.
ಪರೀಕ್ಷಾ ಮಂಡಳಿಯ ಈ ಎಡವಟ್ಟಿಗೆ ಶಾಲಿನಿ ತಂದೆ ಕಿಡಿಕಾರಿದ್ದು, ಇಂತಹ ತಪ್ಪನ್ನು ಮತ್ಯಾರಿಗೂ ಮಾಡಬಾರದೆಂದು ಹೇಳಿದ್ದಾರೆ. ಸದ್ಯ ಎಸ್ಎಸ್ಎಲ್ಸಿ ಬೋರ್ಡ್ನ ಎಡವಟ್ಟಿಗೆ ಶಾಲಿನಿ ತಂದೆ ಅನ್ಬು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.