ಪುಲ್ವಾಮಾ ದಾಳಿಗೆ ಒಂದು ವರ್ಷ, ಹುತಾತ್ಮ ಯೋಧರಿಗೆ ದೇಶ ನಮನ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.14- ಸಿಆರ್‌ಪಿಎಫ್‌ ನ 40 ಮಂದಿ ಯೋಧರನ್ನು ಬಲಿ ಪಡೆದ ಜಮ್ಮು-ಕಾಶ್ಮೀರದ ಪುಲ್ವಾಮಾ ಉಗ್ರರ ದಾಳಿಗೆ ಇಂದು ಒಂದು ವರ್ಷ. ಈ ಸಂದರ್ಭದಲ್ಲಿ ಹುತಾತ್ಮ ಯೋಧರಿಗೆ ದೇಶಾದ್ಯಂತ ಗೌರವ ನಮನ ಸಲ್ಲಿಸಲಾಗುತ್ತಿದೆ. ಉಗ್ರರ ದಾಳಿ ನಡೆದು ಒಂದು ವರ್ಷವಾದ ಹಿನ್ನೆಲೆಯಲ್ಲಿ ಇಂದು ವಿವಿಧೆಡೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ.

ಶ್ರೀನಗರದಲ್ಲಿರುವ ಸ್ಮಾರಕದಲ್ಲಿ ಯೋಧರಿಗೆ ಸಿಆರ್‍ಪಿಎಫ್ ಶ್ರದ್ಧಾಂಜಲಿ ಸಲ್ಲಿಸಲಿದೆ. ಪುಲ್ವಾಮಾದ ಲೆತ್ ಪೋರಾದಲ್ಲಿರುವ ಸಿಆರ್‍ಪಿಎಫ್ ತರಬೇತಿ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಅಧಿಕಾರಿಗಳು ಮತ್ತು ಸೇನಾ ಸಿಬ್ಬಂದಿ ಹುತಾತ್ಮ ಯೋಧರನ್ನು ಸ್ಮರಿಸಲಿದ್ದಾರೆ. 2019ರ ಫೆ.14ರಂದು ಪುಲ್ವಾಮಾ ಜಿಲ್ಲಾಯ ಜಮ್ಮು-ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಆರ್‍ಪಿಎಫ್ ಸಿಬ್ಬಂದಿಯನ್ನು ಸಾಗಿಸುತ್ತಿದ್ದ ವಾಹನವನ್ನು ಗುರಿಯಾಗಿರಿಸಿ ಆತ್ಮಾಹುತಿ ಬಾಂಬರ್ ಇದ್ದ ಕಾರನ್ನು ಡಿಕ್ಕಿ ಹೊಡೆಸಿ ಸ್ಫೋಟ ನಡೆಸಲಾಗಿತ್ತು.

ಪಾಕಿಸ್ತಾನ ಮೂಲದ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆ ಈ ದಾಳಿಯಲ್ಲಿ ಭಾಗಿಯಾಗಿತ್ತು. 1989ರ ಬಳಿಕ ಭದ್ರತಾ ಪಡೆಗಳ ಮೇಲೆ ನಡೆದ ಅತೀ ದೊಡ್ಡ ದಾಳಿ ಇದಾಗಿತ್ತು. ಈ ದಾಳಿಗೆ ದೇಶದೆಲ್ಲೇಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ದಾಳಿಯಲ್ಲಿ ಹುತಾತ್ಮರಾದವರ ಪೈಕಿ ಕರ್ನಾಟಕ ಯೋಧ ಹೆಚ್.ಗುರು ಕೂಡ ಒಬ್ಬರಾಗಿದ್ದಾರೆ.

ದಾಳಿಯಲ್ಲಿ ಹುತಾತ್ಮರಾದ 40 ಯೋಧರ ಸ್ಮರಣಾರ್ಥ ಲಾತ್ ಪೋರ ಸೇನಾ ಶಿಬಿರದಲ್ಲಿ ನಿರ್ಮಿಸಿರುವ ಸ್ಮಾರಕ ಉದ್ಘಾಟನೆ, ಈ ಸ್ಮಾರಕಕ್ಕಾಗಿ ಹುತಾತ್ಮರಾದ ಯೋಧರ ಮನೆಯಿಂದ ಮಣ್ಣನ್ನು ಸಂಗ್ರಹಿಸಿ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಎಲ್ಲಾ40 ಮಂದಿ ಯೋಧರ ಹೆಸರು ಮತ್ತು ಭಾವಚಿತ್ರವನ್ನು ಸ್ಮಾರಕ ಒಳಗೊಂಡಿದೆ.

ಗಣ್ಯರ ನಮನ: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ 40 ಯೋಧರ ಗೌರವಾರ್ಥ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವರು ಹಾಗೂ ವಿವಿಧ ಪಕ್ಷಗಳ ಮುಖಂಡರು ಸೇರಿದಂತೆ ಗಣ್ಯಾತಿಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.  ಸಾಮಾಜಿಕ ಜಲತಾಣ ಟ್ವಿಟ್ಟರ್‍ನಲ್ಲಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿರುವ ರಾಜನಾಥ್‍ಸಿಂಗ್ ಅವರು, 2019ರ ಫೆ.14ರಂದು ಪುಲ್ವಾಮಾದಲ್ಲಿ ನಡೆದ ಭೀಕರ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್‍ಪಿಎಫ್ ವೀರ ಯೋಧರನ್ನು ನೆನೆಯುತ್ತಿದ್ದೇವೆ. ವೀರ ಯೋಧರ ತ್ಯಾಗ, ಬಲಿದಾನವನ್ನು ಭಾರತ ಎಂದಿಗೂ ಮರೆಯುವುದಿಲ್ಲ. ಭಯೋತ್ಪಾದನೆ ವಿರುದ್ಧ ಇಡೀ ದೇಶ ಒಗ್ಗೂಡಿಸಿದೆ. ಭಯೋತ್ಪಾದನೆ ಎಂಬ ಪಿಡುಗಿನ ವಿರುದ್ಧ ಪ್ರತಿಯೊಬ್ಬರೂ ಹೋರಾಟ ಮಾಡಲು ಬದ್ಧರಾಗಿದ್ದಾರೆಂದು ಹೇಳಿದ್ದಾರೆ.

ಇದರಂತೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಕೂಡ ಹುತಾತ್ಮ ವೀರ ಯೋಧರಿಗೆ ನಮನ ಸಲ್ಲಿಸಿದ್ದಾರೆ, ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುತ್ತೇನೆ. ವೀರ ಯೋಧರ ಬಲಿದಾನ, ಅವರ ಕುಟುಂಬದ ತ್ಯಾಗವನ್ನು ದೇಶ ಎಂದಿಗೂ ಮರೆಯುವುದಿಲ್ಲ ಎಂದು ತಿಳಿಸಿದ್ದಾರೆ.

Facebook Comments