ಪುನೀತ್ ರಾಜಕುಮಾರ್ ಕಣ್ಣುಗಳಿಂದ 10 ಮಂದಿಗೆ ದೃಷ್ಟಿ ಭಾಗ್ಯ.!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.13- ಪುನೀತ್ ರಾಜ್‍ಕುಮಾರ್ ದಾನ ಮಾಡಿರುವ ಅವರ ಎರಡು ಕಣ್ಣುಗಳನ್ನು 10ಕ್ಕೂ ಹೆಚ್ಚು ಮಂದಿಗೆ ಬಳಕೆ ಮಾಡಿ ದೃಷ್ಟಿ ನೀಡುವ ಮಹತ್ಕಾರ್ಯದಲ್ಲಿ ನಾರಾಯಣ ನೇತ್ರಾಲಯ ನಿರತವಾಗಿದೆ. ಪುನೀತ್ ಅವರ ಎರಡು ಕಣ್ಣುಗಳಲ್ಲಿ ಈಗಾಗಲೇ ನಾಲ್ಕು ಮಂದಿಗೆ ಬಳಕೆ ಮಾಡಿದ್ದು, ಉಳಿದ ಕಣ್ಣಿನ ಅಂಗಾಂಗಗಳನ್ನು 10ಕ್ಕೂ ಹೆಚ್ಚು ಮಂದಿಗೆ ನೀಡಲು ಕಾರ್ಯ ನಿರತರಾಗಿದ್ದೇವೆ ಎಂದು ನಾರಾಯಣ ನೇತ್ರಾಲಯದ ತಜ್ಞ ವೈದ್ಯ ಡಾ.ಯತೀಶ್ ಸುದ್ದಿಗೋಷ್ಠಿಯಲ್ಲಿ ಇಂದು ತಿಳಿಸಿದರು.

ಖಚಿತವಾಗಿ ಎಷ್ಟು ಮಂದಿಗೆ ಅಪ್ಪು ಕಣ್ಣುಗಳನ್ನು ಬಳಕೆ ಮಾಡಿಕೊಳ್ಳಬಹುದು ಎಂಬ ಬಗ್ಗೆ ಈಗಲೇ ನಿರ್ಧರಿಸಲು ಸಾಧ್ಯವಿಲ್ಲ. ಆದರೂ 10ಕ್ಕೂ ಹೆಚ್ಚು ಮಂದಿಗೆ ದೃಷ್ಟಿ ನೀಡುವತ್ತ ಗಮನ ಹರಿಸಿದ್ದೇವೆ ಎಂದರು.

ಅಪ್ಪು ಕಣ್ಣಿನ ಕಪ್ಪು ಗುಡ್ಡೆಯನ್ನು ಈಗಾಗಲೇ ನಾಲ್ಕು ಮಂದಿಗೆ ಅಳವಡಿಸಲಾಗಿದೆ. ಬಿಳಿ ಗುಡ್ಡೆ ಮಧ್ಯೆ ಇರುವ ಸ್ಟೆಮ್ ಸೆಲ್ಸ್ ಅನ್ನು ಸಂರಕ್ಷಿಸಿಡಲಾಗಿದ್ದು , ಆ ಸೆಲ್ಸ್ ಅನ್ನು ದೃಷ್ಟಿ ಕಳೆದುಕೊಂಡಿರುವ ಅಳವಡಿಸಲು ಸಿದ್ಧತೆ ನಡೆಸಿದ್ದೇವೆ ಎಂದರು. ಇಂತಹ ಪ್ರಯತ್ನ ದೇಶದಲ್ಲೇ ಮೊಟ್ಟ ಮೊದಲನೆಯದಾಗಿದ್ದು, ಕಣ್ಣಿನ ದೃಷ್ಟಿ ಅವಶ್ಯಕತೆ ಇರುವವರನ್ನು ಡಾ.ರಾಜ್‍ಕುಮಾರ್ ಐ ಬ್ಯಾಂಕ್ ಮೂಲಕ ಪತ್ತೆ ಹಚ್ಚಲಾಗುತ್ತಿದೆ ಎಂದು ಹೇಳಿದರು.

6 ಸಾವಿರ ಮಂದಿ ನೇತ್ರದಾನ: ಅಪ್ಪು ಸಾವಿನ ಬಳಿಕ ನೇತ್ರದಾನ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. ಇದುವರೆಗೂ 6 ಸಾವಿರಕ್ಕೂ ಹೆಚ್ಚು ಮಂದಿ ನೇತ್ರದಾನ ಮಾಡಲು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದು , ಇಷ್ಟೊಂದು ಮಂದಿ ನೇತ್ರದಾನ ಮಾಡಲು ಮುಂದೆ ಬಂದಿರುವುದು ಮೊದಲಾಗಿದೆ.

Facebook Comments