ಪೊಲೀಸರಿಗೆ ಪುನೀತ್ ಹೆಲ್ತ್ ಟಿಪ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.20- ದಿನನಿತ್ಯದ ಒತ್ತಡದಲ್ಲಿ ಪೊಲೀಸ್ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಯೋಗ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಿ ಎಂದು ನಟ ಪುನೀತ್‍ರಾಜ್‍ಕುಮಾರ್ ಪೊಲೀಸರಿಗೆ ಕಿವಿಮಾತು ಹೇಳಿದರು.

ಇಂದು ಈಶಾನ್ಯವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳಿಂದ ವಶಪಡಿಸಿಕೊಂಡಿರುವ ಚಿನ್ನಾಭರಣಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತ, ನಾವು ಸಿನಿಮಾದಲ್ಲಿ ಹೀರೋಗಳು. ಆದರೆ, ಪೊಲೀಸ್ ಅಧಿಕಾರಿಗಳು ನಿಜ ಜೀವನದ ಹೀರೋಗಳು ಎಂದರು.

ನಾನು ಸಿನಿಮಾದಲ್ಲಷ್ಟೇ ಹೀರೋ ಆಗಿ ಪಾತ್ರ ಮಾಡಿದ್ದೇನೆ. ಆದರೆ, ಪೊಲೀಸರು ದಿನನಿತ್ಯ ಹಲವು ಪ್ರಕರಣಗಳನ್ನು ಬಗೆಹರಿಸುವ ಮೂಲಕ ತಮ್ಮ ಜೀವನವನ್ನೇ ಜನರಿಗಾಗಿ ಮುಡುಪಾಗಿಟ್ಟಿದ್ದಾರೆ. ಪೊಲೀಸರು ಯೋಗ ಮಾಡುವ ಮೂಲಕ ಶಾಂತವಾಗಿರಿ ಎಂದರು.
ಯಾವುದೇ ಕಾರ್ಯಕ್ರಮ ಮುಗಿದ ಮೇಲೆ ಎಲ್ಲರಿಗೂ ವಂದನೆ ಹೇಳುತ್ತೇವೆ. ಆ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಯಲು ಪೊಲೀಸರ ಪಾತ್ರ ಬಹುಮುಖ್ಯವಾಗಿರುತ್ತದೆ.

ಆದರೆ, ನಾವು ಅವರಿಗೆ ಧನ್ಯವಾದ ಹೇಳುವುದನ್ನೇ ಮರೆಯುತ್ತೇವೆ ಎಂದು ತಂದೆಯವರು ಹೇಳಿದ್ದನ್ನು ಸ್ಮರಿಸಿದ ಅವರು, ಕಾರ್ಯಕ್ರಮದಲ್ಲಿ ಎಲ್ಲರಿಗೂ ಧನ್ಯವಾದ ಹೇಳಿದರು.
ವಾರಸುದಾರರಿಗೆ ತಮ್ಮ ತಮ್ಮ ವಸ್ತುಗಳನ್ನು ಹಿಂದಿರುಗಿಸಲು ಪೊಲೀಸ್ ಅಧಿಕಾರಿಗಳು ನನ್ನನ್ನು ಆಹ್ವಾನಿಸಿದ್ದರು.

ಅಲ್ಲದೆ ನಮ್ಮ ಏರಿಯಾ ಆಗಿರುವುದರಿಂದ ನಾನು ಬಂದಿದ್ದೇನೆ ಎಂದು ಪುನೀತ್ ಹೇಳಿದರು. ಇದೇ ಸಂದರ್ಭದಲ್ಲಿ ಕಾಪ್ ಆಫ್ ದ ಮಂತ್ ಅವಾರ್ಡ್ ನೀಡಿ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರನ್ನು ಪೊಲೀಸ್ ಅಧಿಕಾರಿಗಳು ಅಭಿನಂದಿಸಿದರು.

Facebook Comments

Sri Raghav

Admin