ಪುನೀತ್‍ರಾಜ್‍ಕುಮಾರ್ ನುಡಿನಮನಕ್ಕೆ ಭರ್ಜರಿ ಸಿದ್ಧತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.9- ಪುನೀತ್ ರಾಜ್‍ಕುಮಾರ್ ನುಡಿ ನಮನ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಚಿತ್ರರಂಗದ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕಾಗಿದೆ. ಪುನೀತ್ ಅಗಲಿಕೆಯಿಂದ ಇಡೀ ಕರುನಾಡೇ ಶೋಕ ಸಾಗರದಲ್ಲಿ ಮುಳುಗಿದ್ದು, ಇಷ್ಟೊಂದು ದೊಡ್ಡ ಮಟ್ಟದ ಅಭಿಮಾನಿ ವರ್ಗವನ್ನು ಅಪ್ಪು ಹೊಂದಿರುವುದು ಇಡೀ ಭಾರತ ಚಿತ್ರರಂಗಕ್ಕೆ ಅಚ್ಚರಿ ಮೂಡಿಸಿದೆ.

ಇದಲ್ಲದೆ ಕನ್ನಡ ಚಿತ್ರರಂಗಕ್ಕೂ ಅಪ್ಪು ಅಗಲಿಕೆ ಒಂದು ದೊಡ್ಡ ಆಘಾತವಾಗಿದ್ದು , ಅಗಲಿದ ಚೇತನಕ್ಕೆ ಭಾವಪೂರ್ಣ ಗೀತ ನಮನ , ನುಡಿ ನಮನ ಸಲ್ಲಿಸುವ ನಿಟ್ಟಿನಲ್ಲಿ ಸಾ.ರಾ.ಗೋವಿಂದು, ಜೈರಾಜ್ , ಗುರುಕಿರಣ್ ಸೇರಿದಂತೆ ಹಲವಾರು ಚಿತ್ರರಂಗದ ಗಣ್ಯರು ಶ್ರಮಿಸುತ್ತಿದ್ದಾರೆ.

ನ.16ರಂದು ಅರಮನೆ ಮೈದಾನದಲ್ಲಿ ನಡೆಯಲಿರುವ ಈ ಅಪೂರ್ವ ಕಾರ್ಯಕ್ರಮಕ್ಕೆ ಯಾವುದೇ ಚ್ಯುತಿ ಬಾರದಂತೆ
ಎಚ್ಚರಿಕೆಯಿಂದ ನಡೆಸಲು ಸಿದ್ಧತೆಗಳು ನಡೆಯುತ್ತಿದ್ದು, ಇಂದು ಇದರ ಬಗ್ಗೆ ವಿಸ್ತೃತವಾದ ಚರ್ಚೆಗಳನ್ನು ನಡೆಸಲಾಗಿದೆ.

ನಗರದಲ್ಲಿ ನಡೆದ ಚಿತ್ರರಂಗದ ಗಣ್ಯರ ಸಭೆಯಲ್ಲಿ ಗುರುಕಿರಣ್ , ಅರ್ಜುನ್ ಜನ್ಯ ಸೇರಿದಂತೆ ಹಲವು ಸಂಗೀತ ನಿರ್ದೇಶಕರು ಪ್ರಸ್ತುತ ಪಡಿಸುವ ಗೀತೆಗಳ ಗಾಯನವಿದ್ದು , ಯಾವ ಯಾವ ಗೀತೆಗಳನ್ನು ಹಾಡಬೇಕು. ಮತ್ತು ಯಾವ ಗಣ್ಯರನ್ನು ಆಹ್ವಾನ ಮಾಡಬೇಕು. ಮಾತನಾಡುವವರು ಯಾರು ಮತ್ತು ಆತಿಥ್ಯದ ವ್ಯವಸ್ಥೆ ಕುರಿತಂತೆ ಮಹತ್ವದ ಚರ್ಚೆ ನಡೆದಿದೆ.

ಇಡೀ ಚಿತ್ರರಂಗದ ಗಣ್ಯರು ಇಲ್ಲಿ ಸಮಾಗಮಗೊಳ್ಳುವ ಸಾಧ್ಯತೆ ಇರುವುದರಿಂದ ಭದ್ರತೆ ಪ್ರಮುಖ ವಿಷಯವಾಗಿದ್ದು, ಪೆÇಲೀಸ್ ಇಲಾಖೆಯೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಇನ್ನೊಂದೆಡೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಞಾನೇಂದ್ರ, ಕಂದಾಯ ಸಚಿವ ಆರ್. ಅಶೋಕ್ ಸೇರಿದಂತೆ ಹಲವಾರು ಸಚಿವರು, ಶಾಸಕರು ಈ ಕಾರ್ಯಕ್ರಮಕ್ಕೆ ಸಾಥ್ ನೀಡಿದ್ದು , ಒಟ್ಟಾರೆ ಇದೊಂದು ಅಭೂತಪೂರ್ವ ಕಾರ್ಯಕ್ರಮವನ್ನು ನಡೆಸಲು ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ.

ಕನ್ನಡ ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷ ಜಯರಾಜ್, ಕೆ.ವಿ.ಚಂದ್ರಶೇಖರ್, ನಿರ್ದೇಶಕ ನಾಗಣ್ಣ, ನಿರ್ಮಾಪಕ ಗಣೇಶ್, ಚಿತ್ರ ಸಾಹಿತಿ ನಾಗೇಂದ್ರಪ್ರಸಾದ್, ಥಾಮಸ್ ಡಿಸೋಜಾ ಮುಂತಾದವರು ಪಾಲ್ಗೊಂಡಿದ್ದರು.

Facebook Comments