ಪಟಾಕಿ ಹಚ್ಚೋದು ಬೇಡ ಎಂದಿದ್ದ ಪುನೀತ್ ವಿಡಿಯೋ ವೈರಲ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.3- ಕತ್ತಲೆ ಕಳೆದು ಎಲ್ಲರ ಬಾಳಲ್ಲೂ ಬೆಳಕು ಮೂಡಿಸುವ ದೀಪಾವಳಿ ಹಬ್ಬ ಬಂತೆಂದರೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಉತ್ತಮ ಸಂದೇಶವನ್ನು ನೀಡುತ್ತಿದ್ದರು, ಆದರೆ ಈ ಬಾರಿ ಸಂದೇಶ ನೀಡಲು ಅಪ್ಪು ಇಲ್ಲ ಆದರೆ ಅವರು ಕಳೆದ ವರ್ಷ ಮಾಡಿದ್ದ ವೀಡಿಯೋ ತುಣಕನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದು ಮತ್ತೊಮ್ಮೆ ವೈರಲ್ ಆಗಿದೆ.

ನಮ್ಮ ನೆಚ್ಚಿನ ನಟ ಪುನೀತ್‍ರಾಜ್‍ಕುಮಾರ್ ಅವರು ನಮ್ಮನ್ನಗಲಿರುವುದು ಈ ವರ್ಷ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಲು ಮನಸ್ಸು ಆಗುತ್ತಿಲ್ಲ, ನಮ್ಮ ಅಪ್ಪು ಯಾವಾಗಲೂ ಹೇಳುತ್ತಿದ್ದರೂ ಪಟಾಕಿ ಹೊಡೆಯುವ ಮೂಲಕ ಪರಿಸರವನ್ನು ಹಾಳು ಮಾಡಬೇಡಿ ಎಂದು ಮನವಿ ಮಾಡಿದ್ದರು, ಅವರ ಮನವಿಯಂತೆ ನಾವು ಈ ವರ್ಷ ಪಟಾಕಿ ಸಿಡಿಸುವುದಿಲ್ಲ ಎಂದು ಹೇಳಿದ ಅಭಿಮಾನಿಗಳು ಪಣತೊಟ್ಟಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಪುನೀತ್‍ರಾಜ್‍ಕುಮಾರ್ ಅವರು, ಈ ವರ್ಷ ಕೊರೊನಾ ಹೆಚ್ಚಾಗಿರುವುದರಿಂದ ಪಟಾಕಿ ಹಚ್ಚುವುದು ಬೇಡ, ಆದರ ಬದಲು ದೇಹದಲ್ಲಿರುವ ಕ್ಯಾಲೋರಿಯನ್ನು ಸುಡುವ ದೀಪಾವಳಿಯು ಎಲ್ಲರ ಬಾಳನ್ನು ಬೆಳಗಲಿ ಎಂದು ಶುಭ ಹಾರೈಸಿದ್ದರು.

ಆದರೆ ಈ ವರ್ಷ ಪಟಾಕಿ ಹಚ್ಚಬೇಡಿ, ಪರಿಸರವನ್ನು ಹಾಳು ಮಾಡಬೇಡಿ ಎಂಬ ಸಂದೇಶವನ್ನು ನೀಡಲು ನಮ್ಮ ಮೆಚ್ಚಿನ ತಾರೆ ಪುನೀತ್‍ರಾಜ್‍ಕುಮಾರ್ ಅವರೇ ನಮ್ಮ ಜೊತೆ ಇಲ್ಲವಲ್ಲ ಎಂದು ಅಭಿಮಾನಿಗಳು ತಮ್ಮ ದುಃಖವನ್ನು ಹಂಚಿಕೊಂಡಿದ್ದಾರೆ.

Facebook Comments