ಸ್ವರ್ಗದಲ್ಲಿ ಅಪ್ಪನೊಂದಿಗೆ ಅಪ್ಪು ಕಣ್ಣಾಮುಚ್ಚಾಲೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.4- ಕನ್ನಡ ಚಿತ್ರರಂಗಕ್ಕೆ ತಮ್ಮ ಜೀವನವನ್ನೇ ಕಲೆಗೆ ಮುಡುಪಾಗಿಟ್ಟ ಅಣ್ಣಾವ್ರು (ಡಾ.ರಾಜ್‍ಕುಮಾರ್)ರಂತೆಯೇ ಕನ್ನಡದ ಕಣ್ಮಣಿಯಾಗಿದ್ದ ಪವರ್ ಸ್ಟಾರ್ ಪುನೀತ್‍ರಾಜ್‍ಕುಮಾರ್ ಅವರ ಅಗಲಿಕೆಯಿಂದ ಅಭಿಮಾನಿ ಗಳು, ಚಿತ್ರರಂಗ ಕಣ್ಣೀರ ಕಡಲಲ್ಲಿ ಮುಳುಗಿದಂತಾಗಿದೆ.

ತಮ್ಮ ನೆಚ್ಚಿನ ನಟ ಅಪ್ಪು ಅವರಿಗೆ ಅಭಿಮಾನಿಗಳು ನಾನಾ ರೀತಿಯ ಪ್ರೇಮವನ್ನು ಮೆರೆದು ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ತಮ್ಮ ನಿಷ್ಕಲ್ಮಶ ಪ್ರೀತಿಯನ್ನು ತೋರ್ಪಡಿಸುತ್ತಿರುವಾಗಲೇ ಇಲ್ಲೊಬ್ಬ ಕಲಾವಿದ ಸ್ವರ್ಗದಲ್ಲಿ ಡಾ.ರಾಜ್ ಕುಮಾರ್ ಹಾಗೂ ಪವರ್‍ ಸ್ಟಾರ್ ಪುನೀತ್‍ರಾಜ್‍ಕುಮಾರ್ ಅವರು ಕಣ್ಣಾಮುಚ್ಚಾಲೆ ಆಡುತ್ತಿರುವಂತಹ ಫೋಟೋವನ್ನು ತಮ್ಮ ಕೈಚಳಕದಲ್ಲಿ ಮೂಡಿಸಿದ್ದು ಅಪ್ಪು ಅಭಿಮಾನಿಗಳ ಮನ ಸೆಳೆಯುತ್ತಿದೆ.

ಕನ್ನಡ ಸಿನಿಮಾರಂಗದಲ್ಲಿ ಫೋಸ್ಟರ್ ಡಿಸೈನರ್ ಆಗಿರುವ ಕರಣ್ ಆಚಾರ್ಯ ಅವರು ತಮ್ಮ ಕಲ್ಪನಾ ಲಹರಿಯಲ್ಲಿ ಸ್ವರ್ಗದಲ್ಲಿರುವ ಡಾ.ರಾಜ್‍ಕುಮಾರ್ ಹಾಗೂ ಪುನೀತ್‍ರಾಜ್‍ಕುಮಾರ್‍ರನ್ನು ವಿಭಿನ್ನ ರೀತಿಯಲ್ಲಿ ತೋರಿಸಲು ಬಯಸಿದ್ದಾರೆ, ಅದರಂತೆ ಕಾಣದಂತೆ ಮಾಯವಾಗಿರುವ ಪುನೀತ್ ಸ್ವರ್ಗದಲ್ಲಿ ಅಪ್ಪಾಜಿ (ಡಾ.ರಾಜ್‍ಕುಮಾರ್)ರ ಕಣ್ಣನ್ನು ಹಿಂದಿನಿಂದ ಮುಚ್ಚುವ ಮೂಲಕ ನಾನು ಯಾರು ಹೇಳಿ ಎಂದು ಪ್ರೀತಿಯಿಂದ ಕೇಳುವಂತಿರುವ ಫೋಸ್ಟರ್ ಅನ್ನು ಕಣ್ಣು ಅಪ್ಪು ಅಭಿಮಾನಿಗಳು ಭಾವುಕ ರಾಗಿದ್ದಾರೆ.

ಅಣ್ಣಾವ್ರ ಚಿತ್ರ ಜೀವನದಲ್ಲಿ ಕಸ್ತೂರಿ ನಿವಾಸ ಒಂದು ಮೈಲುಗಲ್ಲನ್ನು ನಿರ್ಮಿಸಿತ್ತು, ಆ ಚಿತ್ರದ ಕೊನೆಯವರೆಗೂಡಾ.ರಾಜ್‍ಕುಮಾರ್‍ರ ಪಾತ್ರಕ್ಕೆ ಇದ್ದ ಮಹತ್ವದಷ್ಟೇ ಪಾರಿವಾಳಕ್ಕೂ ಚಿತ್ರದ ನಿರ್ದೇಶಕರು ನೀಡಿದ್ದರು. ಚಿತ್ರದ ಕ್ಲೈಮ್ಯಾಕ್ಸ್‍ನಲ್ಲಿ ಡಾ.ರಾಜ್ ಕುಮಾರ್‍ರ ಪುತ್ಥಳಿಯ ಹೆಗಲ ಮೇಲೆ ಪಾರಿವಾಳವು ಹಾರಿ ಬಂದು ಕೂರುವ ದೃಶ್ಯವು ಅಣ್ಣಾವ್ರ ಅಭಿಮಾನಿಗಳ ಕಣ್ಣಿಗೆ ಇಂದಿಗೂ ಕಟ್ಟಿದಂತಿದೆ.

ಇನ್ನು ಪುನೀತ್‍ರಾಜ್‍ಕುಮಾರ್‍ರ ಚಿತ್ರ ಪಯಣದಲ್ಲಿ ಮರೆಯಲಾರದಂತಹ ಚಿತ್ರವಾಗಿರುವ ಸಂತೋಷ್ ಆನಂದ್‍ರಾಮ್ ನಿರ್ದೇಶನದ ರಾಜಕುಮಾರ ಸಿನಿಮಾದಲ್ಲೂ ಪಾರಿವಾಳಕ್ಕೆ ಮಹತ್ವ ಕೊಡಲಾಗಿತ್ತು. ಆ ಕಾನ್ಸೆಪ್ಟ್ ಅನ್ನು ಬಳಸಿಕೊಂಡಿರುವ ಕರಣ್ ಆಚಾರ್ಯ ಅವರು ಸ್ವರ್ಗದಲ್ಲಿರುವಂತೆ ಬಿಳಿ ಮೋಡಗಳ ನಡುವೆ ಅಪ್ಪಾಜಿಯ ಕಣ್ಣನ್ನು ಮುಚ್ಚಿರುವ ಅಪ್ಪು (ಪುನೀತ್) ನಾನು ಯಾರು ಹೇಳು ಎಂದು ಕೇಳುತ್ತಿದ್ದರೆ ಅವರ ಸುತ್ತಲು ಪಾರಿವಾಳಗಳ ಸ್ವಚ್ಛಂದವಾಗಿ ಹಾರಾಡುತ್ತಿವೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಸಾಕಷ್ಟು ಪ್ರಶಂಸೆಗೂ ಒಳಗಾಗಿದೆ.

ಇದನ್ನು ಕಂಡು ಅಭಿಮಾನಿಯೊಬ್ಬರು ಈ ದೀಪಾವಳಿ ಹಬ್ಬದಲ್ಲಿ ಡಾ.ರಾಜ್‍ಕುಮಾರ್ ಹಾಗೂ ಪುನೀತ್‍ರಾಜ್‍ಕುಮಾರ್ ಅವರು ನಮ್ಮ ಜೊತೆ ಇಲ್ಲದಿರುವುದು ತುಂಬಾ ಬೇಸರದ ಸಂಗತಿಯಾಗಿದ್ದು ಸ್ವರ್ಗದಲ್ಲಿರುವ ಅಣ್ಣಾವ್ರು ಹಾಗೂ ಅಪ್ಪು ಅವರು ಅಲ್ಲೇ ದೀಪಾವಳಿ ಹಬ್ಬವನ್ನು ಆಚರಿಸುವ ರೀತಿಯಲ್ಲಿ ಒಂದು ಫೋಟೋ ಸೃಷ್ಟಿಸಿ ಸಾರ್ ಎಂದು ಟ್ವಿಟ್ ಮಾಡಿದ್ದಾರೆ.

ಇನ್ನು ಕೆಲವರು ಕರಣ್ ಆಚಾರ್ ಅವರು ಸ್ವರ್ಗದಲ್ಲಿರುವ ಪಾರ್ವತಮ್ಮ ರಾಜ್‍ಕುಮಾರ್ ಅವರನ್ನು ಮರೆಯಬಾರದಿತ್ತು, ಅಣ್ಣಾವ್ರು, ಅಪ್ಪು ಅವರ ಫೋಟೋ ದೊಂದಿಗೆ ಪಾರ್ವತಮ್ಮ ಅವರ ಫೋಟೋವು ನಿಮ್ಮ ಕಲ್ಪನೆಯಲ್ಲಿ ರಚನೆಯಾಗಿದ್ದರೆ ಫೋಟೋ ಮತ್ತಷ್ಟು ಸುಂದರವಾಗಿರುತ್ತಿತ್ತು ಎಂದು ಹೇಳಿದ್ದಾರೆ. ಅಂದ ಹಾಗೆ ಈ ಕರಣ್ ಆಚಾರ್ಯ ಬೇರ್ಯಾರೂ ಅಲ್ಲ ಶ್ರೀರಾಮನಭಕ್ತ ಹನುಮಂತ ಸದಾ ಶಾಂತ ಚಿತ್ತನಾಗಿರುವ ಫೋಟೋಗಳೇ ಎಲ್ಲೆಡೆ ರಾರಾಜಿಸುತ್ತಿದ್ದಾಗ ತಮ್ಮ ಕಲ್ಪನಾ ಲಹರಿಯಲ್ಲಿ ಆಂಗ್ರಿ ಹನುಮಾನ್‍ನನ್ನು ಸೃಷ್ಟಿಸುವ ಮೂಲಕ ಸಾಕಷ್ಟು ವೈರಲ್ ಮಾಡಿದ್ದರು.

ಹನುಮನ ಭಕ್ತರು ಆ ಚಿತ್ರಗಳನ್ನು ತಮ್ಮ ಡಿಪಿ, ವಾಟ್ಸಪ್, ಸೋಶಿಯಲ್ ಮೀಡಿಯಾಗಳಲ್ಲಿ ಹಾಕಿಕೊಳ್ಳುವ ಮೂಲಕ ವೈರಲ್ ಆಗಿತ್ತು, ಈಗ ಸ್ವರ್ಗದಲ್ಲಿರುವ ಡಾ.ರಾಜ್‍ಕುಮಾರ್ ಹಾಗೂ ಪವರ್‍ಸ್ಟಾರ್ ಪುನೀತ್‍ರಾಜ್‍ಕುಮಾರ್‍ರ ಫೋಟೋ ಕೂಡಾ ಸಾಕಷ್ಟು ವೈರಲ್ ಆಗಿದೆ.
ಕರಣ್ ಆಚಾರ್ಯ ಅವರು ಈ ಹಿಂದೆ ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ರವಿಬೋಪಣ್ಣ ಚಿತ್ರದ ಗೆಟಪ್ ಅನ್ನು ಬಿಡಿಸುವ ಮೂಲಕ ರವಿಚಂದ್ರನ್‍ರ ಪ್ರಶಂಸೆ ಪಡೆದಿದ್ದರಲ್ಲದೆ, ಕನ್ನಡ ಚಿತ್ರರಂಗದ ಬ್ರಹ್ಮನೆಂದೇ ಬಿಂಬಿಸಿಕೊಂಡಿರುವ ಖ್ಯಾತ ನಿರ್ದೇಶಕ ಪುಟ್ಟಣ್ಣಕಣಗಾಲ್‍ರ ಚಿತ್ರವನ್ನು ಮುಂದಿನ ನಿಲ್ದಾಣ, ಕಥಾಸಂಗಮ ಚಿತ್ರಕ್ಕಾಗಿ ಅನಿಮೇಷನ್‍ನಲ್ಲಿ ಸೃಷ್ಟಿಸಿದ್ದರು.

ಕಾಸರಗೋಡಿನವರಾದ ಕರಣ್ ಆಚಾರ್ಯ ಅವರು ಈಗ ತಾಜ್‍ಮಹಲ್ ಚಂದ್ರು, ರಿಯಲ್‍ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ನಟನೆಯ ರೆಟ್ರೋ ಶೈಲಿಯ ಕಬ್ಜ ಚಿತ್ರದ ಫೋರ್ ಡಿಸೈನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Facebook Comments