ಪುಣ್ಯಾತ್‍ಗಿತ್ತೀರು ಬರ್ತಾವ್ರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ಳಿ ಪರದೆ ಮೇಲೆ ಮಹಿಳಾ ಮಣಿಯರೇ ಅಬ್ಬರಿಸಲು ಸಿದ್ಧರಾಗಿದ್ದಾರೆ. ಇದೇ ವಾರ ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪುಣ್ಯಾತ್‍ಗಿತ್ತೀರು ಬರುತ್ತಿದ್ದಾರೆ. ಸತ್ಯ ಮೂವೀಸ್ ಮೂಲಕ ಸತ್ಯನಾರಾಯಣ್ ಮನ್ನೆ ನಿರ್ಮಾಣದ ಈ ಚಿತ್ರವನ್ನು ಪಾಸಿಬಲ್ ಖ್ಯಾತಿಯ ರಾಜ್ ಬಿ.ಎನ್. ಅವರು ನಿರ್ದೇಶನ ಮಾಡಿದ್ದಾರೆ.

ನಾಲ್ವರು ಯುವತಿಯರ ಜೀವನದ ಹೋರಾಟದ ಕಥೆ ಈ ಚಿತ್ರದಲ್ಲಿದೆ. ಮಮತಾ ರಾಹುತ್, ದಿವ್ಯಶ್ರೀ, ಸಂಭ್ರಮ ಹಾಗೂ ಐಶ್ವರ್ಯ  ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ ಫಿಲಂಸ್ ಮೂಲಕ ಈ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ.

ಸಾಮಾನ್ಯವಾಗಿ ಗಟ್ಟಿಗಿತ್ತಿ ಹೆಂಗಸರನ್ನು ಪುಣ್ಯಾತ್‍ಗಿತ್ತೀರು ಎಂದು ಕರೆಯುತ್ತಾರೆ. ಇಲ್ಲಿ ಬರುವ ಕಥೆಯಲ್ಲಿ ನಾಲ್ವರು ಹುಡ್ಗೀರು ಸಮಾಜದಲ್ಲಿ ದುಡ್ಡಿಗಾಗಿ ಏನೇನೆಲ್ಲಾ ಸರ್ಕಸ್ ಮಾಡುತ್ತಾರೆ ಎನ್ನುವುದನ್ನು ನಿರ್ದೇಶಕರು ತೋರಿಸಿದ್ದಾರೆ.  ಹಾಗಾಗಿ ಪುಣ್ಯಾತ್ ಗಿತ್ತೀರು ಟೈಟಲನ್ನೇ ತಮ್ಮ ಚಿತ್ರದ ಶೀರ್ಷಿಕೆಯನ್ನಾಗಿಸಿ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ.

ಈ ಚಿತ್ರದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿ ಮೊನ್ನೆ ನಡೆಯಿತು. ಈ ಸಂದರ್ಭದಲ್ಲಿ ನಿರ್ದೇಶಕರು ಹಾಜರಿರಲಿಲ್ಲ. ನಿರ್ಮಾಪಕ ಸತ್ಯನಾರಾಯಣ ಮನ್ನೆ ಮಾತನಾಡಿ, ಬಳ್ಳಾರಿ, ಬೆಂಗಳೂರು, ಕನಕಪುರ ಸೇರಿದಂತೆ ವಿವಿಧೆಡೆಗಳಲ್ಲಿ ಸುಮಾರು 35 ದಿನಗಳ ಕಾಲ ಈ ಚಿತ್ರದ ಹಾಡು ಹಾಗೂ ಮಾತಿನ ಭಾಗದ ಚಿತ್ರೀಕರಣ ನಡೆಸಲಾಗಿದೆ. ಸಮಾಜದಲ್ಲಿ ಯಾರ್ಯಾರಿಂದಲೋ ಮೋಸ ಹೋದಂಥ 4 ಜನ ಹುಡುಗಿಯರೆಲ್ಲಾ ಒಂದೆಡೆ ಸೇರಿ ಹೋರಾಟ ನಡೆಸುತ್ತಾರೆ.

ಅವರು ಯಾಕಾಗಿ ಅವರು ಹೀಗೆ ಮಾಡುತ್ತಾರೆ ಎನ್ನುವುದನ್ನು ಪುಣ್ಯಾತ್‍ಗಿತ್ತೀರು ಚಿತ್ರದಲ್ಲಿಯೇ ನೋಡಬೇಕು ಎನ್ನುತ್ತ ಸಮಾಜಕ್ಕೆ ಸಂದೇಶ ನೀಡುವ ಕನಸು ಈ ಚಿತ್ರದ ಮೂಲಕ ಈಡೇರುತ್ತಿದೆ. ಇದು ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗಲಿದೆ ಎಂದು ತಮ್ಮ ಮನದ ಮಾತುಗಳನ್ನು ಹಂಚಿಕೊಂಡರು.

ನಟಿ ಮಮತಾ ರಾಹುತ್ ತನ್ನ ಪಾತ್ರದ ಬಗ್ಗೆ ಮಾತನಾಡಿ, ಈ ಚಿತ್ರದಲ್ಲಿ ನನ್ನದು ಸಿನಿಮಾ ನಟಿಯ ಪಾತ್ರ. ಸಿನಿಮಾದಲ್ಲಿ ಅಭಿನಯಿಸಲು ಹೊಗಿ ಯಾವುದೇ ಅವಕಾಶ ಸಿಗದಿದ್ದಾಗ ಏನೆಲ್ಲಾ ಮಾಡುತ್ತೇನೆ ಎಂಬುದನ್ನು ಈ ಚಿತ್ರದಲ್ಲಿ ನಿರ್ದೇಶಕರು ತುಂಬಾ ಚೆನ್ನಾಗಿ ತೋರಿಸಿದ್ದಾರೆ ಎಂದು ಹೇಳಿದರು.

ನಂತರ ನಟಿ ಸಂಭ್ರಮ ಮಾತನಾಡಿ, ಸುಳ್ಳು ಹೇಳುವುದರಲ್ಲಿ ಎತ್ತಿದ ಕೈ, ಸುಳ್ಳೇ ಈ ಚಿತ್ರದ ತಿರುವಿಗೆ ಕಾರಣ ಎಂದು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಹಾಗೆಯೇ ಮತ್ತೊಬ್ಬ ನಟಿ ಐಶ್ವರ್ಯ ಮಾತನಾಡಿ, ನಾನು ನಾನ್ ಸ್ಟಾಪ್ ಮಾತನಾಡುತ್ತೇನೆ. ಅದು ಜನರಿಗೆ ಇಷ್ಟವಾಗಲಿದೆ ಎಂದು ಹೇಳಿದರು. ಇನ್ನು ಇವರಿಗೆಲ್ಲ ಕಾಳು ಹಾಕುವ ಬಿಲ್ಡರ್ ಆಗಿ ಕುರಿ ರಂಗ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ವಿಭಿನ್ನ ಶೇಡ್‍ಗಳಲ್ಲಿ ಕುರಿ ರಂಗ ಈ ಚಿತ್ರದಲ್ಲಿ ಮಿಂಚಲಿದ್ದು, ನಾಲ್ಕು ಶೇಡ್‍ಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ನಂತರ ನೃತ್ಯ ನಿರ್ದೇಶಕ ತ್ರಿಭುವನ್ ಮಾತನಾಡಿ, ಈ ಚಿತ್ರದಲ್ಲಿ ಎಲ್ಲಾ ಹಾಡುಗಳಿಗೆ ಕೊರಿಯಾಗ್ರಾಫ್ ಮಾಡಲು ನನಗೆ ನಿರ್ದೇಶಕರು ಅವಕಾಶ ನೀಡಿದ್ದಾರೆ. ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿವೆ ಎಂದು ಹೇಳಿದರು. ಚಿತ್ರದಲ್ಲಿ ಖಳನಟನಾಗಿ ಅಭಿನಯಿಸಿರುವ ಸುಧೀರ್ ಕಾಕ್ರೋಚ್ ಮಾತನಾಡಿ, ನನಗೆ ಒಳ್ಳೆಯ ಪಾತ್ರವೇ ಸಿಕ್ಕಿದೆ ಎಂದು ಹೇಳಿದರು.

ಒಟ್ಟಾರೆ ಯುವಪಡೆಗಳೇ ಸೇರಿಕೊಂಡು ನಿರ್ಮಿಸಿರುವ ಈ ಚಿತ್ರಕ್ಕೆ ಶರತ್‍ಕುಮಾರ್ ಜಿ. ಛಾಯಾಗ್ರಹಣ ಮಾಡಿದ್ದು, ರಾಮಾನುಜಮ್ ಸಂಗೀತ ಒದಗಿಸಿದ್ದಾರೆ. ಇನ್ನೇನಿದ್ದರೂ ಬೆಳ್ಳಿ ಪರದೆ ಮೇಲೆ ಪುಣ್ಯಾತ್‍ಗಿತ್ತೀರ ಹವಾ ನೋಡಬೇಕು.

Facebook Comments