‘ಭಕ್ತರಿಲ್ಲದೇ ಪುರಿ ಜಗನ್ನಾಥ ರಥಯಾತ್ರೆ ನಡೆಸ್ತೀವಿ, ಅನುಮತಿ ಕೊಡಿ’ : ಸುಪ್ರೀಂಗೆ ಕೇಂದ್ರ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.22-ಒಡಿಶಾದ ವಿಶ್ವವಿಖ್ಯಾತ ಮತ್ತು ಚಾರಿತ್ರಿಕ ಪುರಿ ಜಗನ್ನಾಥ ರಥಯಾತ್ರೆಯನ್ನು ರದ್ದುಗೊಳಿಸುವುದು ಬೇಡ ಎಂದು ಸುಪ್ರೀಂಕೋರ್ಟ್‍ಗೆ ಮನವಿ ಮಾಡಿರುವ ಕೇಂದ್ರ ಸರ್ಕಾರ, ಸಾರ್ವಜನಿಕರು ಮತ್ತು ಭಕ್ತರಿಲ್ಲದೆ ರಥೋತ್ಸವ ನಡೆಸಲಾಗುತ್ತದೆ.

ಇದಕ್ಕೆ ಅನುಮತಿ ನೀಡಿ ಎಂದು ಕೋರಿದೆ. ನಾಳೆಯಿಂದ ಪುರಿ ರಥಯಾತ್ರೆ ಮತ್ತು ಅದಕ್ಕೆ ಸಂಬಂಧಪಟ್ಟ ಧಾರ್ಮಿಕ ಕೈಂಕರ್ಯಗಳು ಆರಂಭವಾಗಬೇಕಿದ್ದು, ಇಂದು ಮಧ್ಯಾಹ್ನದ ನಂತರ ಸುಪ್ರೀಂಕೋರ್ಟ್ ಈ ಬಗ್ಗೆ ತೀರ್ಪು ನೀಡಲಿದೆ. ಕೋಟ್ಯಂತರ ಭಕ್ತರು ಸರ್ವೋನ್ನತ ನ್ಯಾಯಾಲಯದ ನಿರ್ಧಾರವನ್ನು ಎದುರು ನೋಡುತ್ತಿದ್ದಾರೆ.

ಕೊರೊನಾ ವೈರಸ್ ಹಾವಳಿಯಿಂದಾಗಿ ಈ ವರ್ಷದ ಪುರಿ ರಥಯಾತ್ರೆಗೆ ತಡೆ ನೀಡಿದ್ದ ಸುಪ್ರೀಂಕೋರ್ಟ್‍ನ ಜೂ.18ರ ಆದೇಶವನ್ನು ಮಾರ್ಪಾಡು ಮಾಡುವಂತೆ ಕೋರಿರುವ ಕೇಂದ್ರ ಸರ್ಕಾರ ಶತಮಾನಗಳ ಸಂಪ್ರಾಯವನ್ನು ಈ ವರ್ಷ ನಿಲ್ಲಿಸದಂತೆ ಮನವಿ ಮಾಡಿದೆ.

ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠದ ಮುಂದೆ ಈ ಸಂಬಂಧ ಕೇಂದ್ರದ ಪರವಾಗಿ ಮನವಿ ಮಾಡಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕೊರೊನಾ ವೈರಸ್ ಹಾವಳಿ ಕಾರಣ ಸಾರ್ವಜನಿಕರು ಮತ್ತು ಭಕ್ತರಿಲ್ಲದೇ ಈ ರಥಯಾತ್ರೆಯನ್ನು ನಡೆಸಬಹುದು.

ಇದಕ್ಕಾಗಿ ರಾಜ್ಯ ಸರ್ಕಾರ ಒಂದು ದಿನದ ಕಫ್ರ್ಯೂ ಜಾರಿಗೊಳಿಸಿ ರಥೋತ್ಸವವನ್ನು ನಡೆಸಬಹುದು ಎಂದು ತಿಳಿಸಿದರು.ನಾಳೆ ಪುರಿ ಜಗನ್ನಾಥ ರಥಯಾತ್ರೆ ನಡೆಯದಿದ್ದರೆ ಸಂಪ್ರದಾಯದ ಪ್ರಕಾರ 12 ವರ್ಷಗಳ ಕಾಲ ಈ ಧಾರ್ಮಿಕ ಆಚರಣೆ ನಡೆಸುವಂತಿಲ್ಲ. ಆದ ಕಾರಣ ಅತ್ಯಂತ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ರಥೋತ್ಸವ ನಡೆಸಲು ಅನುಮತಿ ನೀಡಿ ಎಂದು ಕೇಂದ್ರ ಸರ್ಕಾರದ ಪರವಾಗಿ ಮೆಹ್ತಾ ಕೋರಿದರು.

ಕೇಂದ್ರದ ಈ ಮನವಿಗೆ ಒಡಿಶಾ ರಾಜ್ಯ ಸರ್ಕಾರವೂ ಸಹ ಬೆಂಬಲ ಸೂಚಿಸಿದ್ದು, ಭಕ್ತರು ಮತ್ತು ಸಾರ್ವಜನಿಕರಿಲ್ಲದೆ ರಥಯಾತ್ರೆ ನಡೆಸಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಾಗಿ ಮನವಿ ಮಾಡಿದೆ.  ಮಧ್ಯಾಹ್ನದ ನಂತರ ಈ ಮನವಿ ಮತ್ತು ಜೂ.18ರ ತನ್ನ ಅದೇಶ ಮಾರ್ಪಾಡು ಕುರಿತು ಸುಪ್ರೀಂಕೋರ್ಟ್ ನಿರ್ಧಾರ ಪ್ರಕಟಿಸಲಿದೆ.

Facebook Comments