BREAKING : ಪುಷ್ಪ ಅಮರನಾಥ್’ಗೆ ಕೆಪಿಸಿಸಿ ಮಹಿಳಾ ಅಧ್ಯೆಕ್ಷೆ ಪಟ್ಟ
ಬೆಂಗಳೂರು, ನ.2- ಕೆಪಿಸಿಸಿಯ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಬದಲಾವಣೆ ಮಾಡಿರುವ ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿ ಕಾರ್ಯದರ್ಶಿಯಾಗಿದ್ದ ಡಾ.ಬಿ.ಪುಷ್ಪಾ ಅಮರನಾಥ್ ಅವರನ್ನು ನೂತನ ಅಧ್ಯಕ್ಷೆಯನ್ನಾಗಿ ನೇಮಿಸಿದೆ. ನ.1ರಂದೇ ಹೈಕಮಾಂಡ್ ನೇಮಕಾತಿ ಆದೇಶ ಜಾರಿಗೊಳಿಸಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಅವರ ಆದೇಶದ ಮೇರೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಶೋಕ್ ಗೆಹ್ಲೋಟ್ ಅವರು ಮೈಸೂರು ಜಿಲ್ಲಾ ಪಂಚಾಯಿತಿಯ ಜಿಪಂ ಮಾಜಿ ಅಧ್ಯಕ್ಷೆ ಪುಷ್ಪಾ ಅಮರನಾಥ್ ಅವರನ್ನು ನೂತನ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ.
ಸುಮಾರು ನಾಲ್ಕು ವರ್ಷಗಳಿಂದಲೂ ಬೆಳಗಾವಿಯ ಲಕ್ಷ್ಮಿ ಹೆಬ್ಬಾಳ್ಕರ್ ಕೆಪಿಸಿಸಿ ಮಹಿಳಾ ಅಧ್ಯಕ್ಷೆಯಾಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಶಾಸಕಿಯಾಗಿ ಆಯ್ಕೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಬೆಳಗಾವಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಕಾಂಗ್ರೆಸ್ನ ಹಿರಿಯ ನಾಯಕ ಸತೀಶ್ ಜಾರಕಿಹೊಳಿ ಅವರೊಂದಿಗೆ ಸಂದರ್ಶನ ಮಾಡಿಕೊಂಡಿದ್ದರು.
ಒಂದು ಹಂತದಲ್ಲಿ ಜಾರಕಿಹೊಳಿ ಸಹೋದರರು ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮೇಲಿನ ಸಿಟ್ಟಿಗೆ ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸುವಷ್ಟು ರಾಜಕೀಯ ಬಂಡಾಯಕ್ಕೆ ಮುಂದಾಗಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯ ಪ್ರವೇಶದಿಂದ ಅದು ತಣ್ಣಗಾಗಿತ್ತು. ಆದರೆ, ಪಟ್ಟುಬಿಡದ ಜಾರಕಿಹೊಳಿ ಸಹೋದರರು ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಮಹಿಳಾ ಘಟಕದ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಬೇಕೆಂದು ಒತ್ತಡ ಹೇರಿದ್ದರು.
ಅಂದಿನಿಂದಲೂ ಕಾಂಗ್ರೆಸ್ ಹೈಕಮಾಂಡ್ ನೂತನ ಅಧ್ಯಕ್ಷೆಯ ಹುಡುಕಾಟದಲ್ಲಿ ತೊಡಗಿತ್ತು. ಸುಮಾರು 10ಕ್ಕೂ ಹೆಚ್ಚು ಮಂದಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಲಾಬಿ ನಡೆಸಿದ್ದರು. ಎಐಸಿಸಿಯ ಮಹಿಳಾ ಘಟಕದ ಮುಖಂಡರು ಖುದ್ದಾಗಿ ಆಕಾಂಕ್ಷಿಗಳ ಜತೆ ಸಮಾಲೋಚನೆ ನಡೆಸಿದ್ದರು. ಅಂತಿಮವಾಗಿ ಮೈಸೂರಿನ ಪುಷ್ಪಾ ಅಮರನಾಥ್ಗೆ ಅವಕಾಶ ಸಿಕ್ಕಿದೆ.