ಕ್ವಾರಂಟೈನಲ್ಲಿದ್ದವರ ಗೋಳು ಹೇಳ ತೀರದು

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಜೂ.22- ಗುಬ್ಬಿ ತಾಲ್ಲೂಕಿನ ಕಸಬಾ ಹೋಬಳಿಯ ಕಿಟ್ಟದಕುಪ್ಪೆ ಗ್ರಾಮದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟ ನಂತರ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ 53 ಜನರನ್ನು ಹೇರೂರಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದ್ದು, ಸ್ವಚ್ಛತೆ ಇಲ್ಲ ಎಂದು ದೂರಿದ್ದಾರೆ.

ಊಟ ಮತ್ತು ನೀರನ್ನು ಗ್ರಾಮ ಪಂಚಾಯಿತಿಯಿಂದ ನೀಡಲಾಗುತ್ತಿದೆ. ಅದನ್ನು ಪ್ಲಾಸ್ಟಿಕ್ ಕವರ್‍ಗಳಲ್ಲಿ ಕಟ್ಟಿ ಎಸೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕಳೆದ ನಾಲ್ಕು ದಿನಗಳಲ್ಲಿ ಎರಡು ಪ್ರಕರಣ ಪತ್ತೆಯಾಗಿದ್ದು, ಅವರ ಸಂಪರ್ಕದಲ್ಲಿದ್ದವರನ್ನು ಚೇಳೂರಿನ ಪಟೇಲ್ ಕಲ್ಯಾಣ ಮಂಟಪದಲ್ಲಿ 35 ಜನ ಹಾಗೂ ಹೇರೂರಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 53 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

ಕಟ್ಟಡದ ಒಳಗಡೆ ಹೋಗಿ ಸ್ವಚ್ಛ ಮಾಡಲು ಯಾರು ಮುಂದೆ ಬರುತ್ತಿಲ್ಲ. ಇದ್ದ ಇಬ್ಬರು ಕಾವಲುಗಾರರಲ್ಲಿ ಒಬ್ಬರು ಮೊದಲ ದಿನವೇ ಕೆಲಸ ಬಿಟ್ಟು ಹೋಗಿದ್ದಾರೆ. ಕ್ವಾರಂಟೈನ್‍ನಲ್ಲಿರುವ ಕೆಲವರು ಸರಿಯಾಗಿ ಸಹಕರಿಸುತ್ತಿಲ್ಲ.

ಎಲ್ಲಾದರಲ್ಲಿ ಉಗುಳುವುದು, ಉದ್ದೇಶ ಪೂರ್ವಕವಾಗಿ ನಲ್ಲಿಗಳಲ್ಲಿ ನೀರು ಪೋಲು ಮಾಡುತ್ತಿದ್ದಾರೆ. ಮತ್ತೆ ಕೆಲವರು ಸ್ವಯಂ ಪ್ರೇರಿತರಾಗಿ ಸ್ವಚ್ಛತೆಯಲ್ಲಿ ನಿರತರಾಗಿದ್ದು, ಉತ್ತಮ ಸಹಕಾರ ನೀಡುತ್ತಿದ್ದಾರೆ.

ಅಂತವರಿಗೆ ಪೊರಕೆ ಮತ್ತು ಸ್ಯಾನಿಟೈಸೈರ್ ನೀಡಿದ್ದೇವೆ ಎಂದು ಪಿಡಿಒ ಮಾಹಿತಿ ನೀಡಿದರು. ಸೀಲ್‍ಡೌನ್ ಆಗಿರುವ ಕಿಟ್ಟದಕುಪ್ಪೆ ಗ್ರಾಮದಲ್ಲಿನ 114 ಮನೆಗಳಿಗೆ ಸಮರ್ಪಕವಾಗಿ ಹಾಲು, ದಿನಸಿ, ತರಕಾರಿ ಪೂರೈಕೆಯಾಗುತ್ತಿಲ್ಲ.

ಮಕ್ಕಳು ಹಾಗೂ ವಯೋವೃದ್ಧರಿಗೆ ತೊಂದರೆಯಾಗಿದೆ. ರಾಸುಗಳಿಗೆ ಮೇವು ಇಲ್ಲದೆ ಹಸಿವಿನಿಂದ ನರಳುತ್ತಿದ್ದೇವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

Facebook Comments