ಹೊರ ರಾಜ್ಯಗಳಿಂದ ಬರುವವರ ಕ್ವಾರಂಟೈನ್ ಅವಧಿ 7 ರಿಂದ 14 ದಿನಕ್ಕೆ ಏರಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.22- ಹೊರರಾಜ್ಯದಿಂದ ಆಗಮಿಸುವವರ ಕ್ವಾರಂಟೈನ್ ಅವಯನ್ನು 7 ದಿನಗಳಿಗೆ ಬದಲಾಗಿ 14 ದಿನಗಳಿಗೆ ಹೆಚ್ಚಿಸಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ.

ಕರ್ನಾಟಕದಲ್ಲಿ ಸೋಂಕಿತರ ಪ್ರಮಾಣ ದಿಢೀರ್ ಏರಿಕೆಯಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಬಿಗಿ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಟ್ವಿಟ್ ಮಾಡಿ, ದೇಶದ ಸರಾಸರಿಗೆ ಹೋಲಿಕೆ ಮಾಡಿಕೊಂಡರೆ ರಾಜ್ಯ ಸರ್ಕಾರದ ಸ್ಥಿತಿ ಸಮಾಧಾನಕರ ರೀತಿಯಲ್ಲಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಸೋಂಕಿನಿಂದ ಗುಣಮುಖರಾಗುವವರ ಪ್ರಮಾಣ ಶೇ. 61.39ರಷ್ಟಿದೆ ಮತ್ತು ಸಾವಿನ ಪ್ರಮಾಣ ಶೇ.1.91ರಷ್ಟಿದ್ದು ದೇಶದ ಸರಾಸರಿಗೆ ಹೋಲಿಕೆ ಮಾಡಿದರೆ ಕಡಿಮೆ ಇದೆ.

ರಾಜ್ಯದಲ್ಲಿ ಸೋಂಕಿತರನ್ನು ಪತ್ತೆ ಹಚ್ಚುವ ಕಾರ್ಯ ಬಿರುಸಿನಿಂದ ಕೈಗೊಳ್ಳಲಾಗಿದೆ, ಹೊರ ರಾಜ್ಯಗಳಿಂದ ಬರುವವರನ್ನು ಪರೀಕ್ಷೆಗೊಳಪಡಿಸಿ 24 ಗಂಟೆಯೊಳಗಾಗಿ ಸೋಂಕು ಇದೆಯೇ, ಇಲ್ಲವೇ ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ.

ಬೇರೆ ರಾಜ್ಯಗಳಿಂದ ಆಗಮಿಸುವವರನ್ನು ಇನ್ನು ಮುಂದೆ ಕಡ್ಡಾಯವಾಗಿ ಕ್ವಾರಂಟೈನ್‍ಗೆ ಒಳಪಡಿಸಲಾಗುವುದು, ಇದುವರೆಗೂ 7 ದಿನಗಳು ಮಾತ್ರ ಕ್ವಾರಂಟೈನ್‍ನಲ್ಲಿಡಲಾಗುತ್ತಿತ್ತು, ಇನ್ನು ಮುಂದೆ ಅವರನ್ನು 14 ದಿನಗಳ ಕಾಲ ಕ್ವಾರಂಟೈನ್‍ನಲ್ಲಿಡಲಾಗುವುದು ಎಂದು ಹೇಳಿದ್ದಾರೆ.

ದೇಶದಲ್ಲಿ 1ಲಕ್ಷದ 74 ಸಾವಿರ ಸಕ್ರಿಯ ಪ್ರಕರಣಗಳಿದ್ದು, 13,699 ಜನ ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ 9,150 ಕೇಸುಗಳು ಪತ್ತೆಯಾಗಿದ್ದು 5,618 ಮಂದಿ ಗುಣಮುರಾಗಿದ್ದಾರೆ, 3,395 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ, 137 ಮಂದಿ ಸಾವನ್ನಪ್ಪಿದ್ದಾರೆ ಎಂದು ಸುಧಾಕರ್ ತಿಳಿಸಿದ್ದಾರೆ.

Facebook Comments

Sri Raghav

Admin