“ಕೊರೊನಾ ವೇಗಕ್ಕೆ ಕಡಿವಾಣ ಹಾಕಬೇಕಾದರೆ ಲಾಕ್‍ಡೌನ್ ಅನಿವಾರ್ಯ” : ಆರ್.ಅಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.30- ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಎಸ್‌ಎಸ್‌ಲ್‌ಸಿ ಪರೀಕ್ಷೆ ಮುಗಿದ ನಂತರ ಮತ್ತೆ ಲಾಕ್‍ಡೌನ್ ಜಾರಿ ಮಾಡುವ ಸುಳಿವನ್ನು ಸರ್ಕಾರ ನೀಡಿದೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿರುವ ಕಂದಾಯ ಸಚಿವ ಹಾಗೂ ಕೋವಿಡ್ ಉಸ್ತುವಾರಿ ಆರ್.ಅಶೋಕ್, ಕೊರೊನಾ ವೇಗಕ್ಕೆ ಕಡಿವಾಣ ಹಾಕಬೇಕಾದರೆ ಲಾಕ್‍ಡೌನ್ ಅನಿವಾರ್ಯ ಎಂದು ಪರೋಕ್ಷವಾಗಿ ಮತ್ತೆ ಲಾಕ್‍ಡೌನ್ ಮಾಡುವ ಸುಳಿವು ಕೊಟ್ಟರು.

ಪ್ರಸ್ತುತ ಎಸ್‌ಎಸ್‌ಲ್‌ಸಿ ಪರೀಕ್ಷೆ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಬಾರದೆಂಬ ಏಕೈಕ ಕಾರಣಕ್ಕೆ ನಾವು ಸುಮ್ಮನಿದ್ದೇವೆ. ಪರೀಕ್ಷೆ ಮುಗಿದ ಬಳಿಕ ಸ್ಪೀಡ್ ಕಟ್ ಡೌನ್ ಮಾಡಬೇಕಾದರೆ ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ ಎಂದರು.  ಪ್ರತಿ ದಿನ ಆದಾಯ ಕೂಡ ಸಂಗ್ರಹಣೆಯಾಗಬೇಕೆಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಕೊರೊನಾ ಜೊತೆ ಜೀವನ ನಡೆಸುವುದು ಅನಿವಾರ್ಯವಾಗಿದೆ. ಆದರೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕು ಎಂದು ಅವರು ಮನವಿ ಮಾಡಿದರು.

ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಇಲ್ಲವೆ ಹಾಫ್ ಲಾಕ್‍ಡೌನ್ ಮಾಡುವ ತೀರ್ಮಾನವನ್ನು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಬಿಟ್ಟಿದ್ದೇವೆ.ಅವರು ಯಾವ ನಿರ್ಧಾರ ಕೈಗೊಳ್ಳುತ್ತಾರೋ ಅದಕ್ಕೆ ಎಲ್ಲರೂ ಬದ್ದರಾಗಬೇಕು ಎಂದು ಹೇಳಿದರು.

ಕೊರೊನಾ ವಿರುದ್ಧ ನಾವು ಸಮರವನ್ನೇ ಸಾರಿದ್ದೇವೆ. ಇದು ಇಂದು ನಾಳೆಯೇ ಮುಗಿಯುತ್ತದೆ ಎಂಬ ನಂಬಿಕೆ ಇಲ್ಲ. ನಾನು ಆ ಭ್ರಮೆಯಲ್ಲೂ ಇಲ್ಲ. ಎಲ್ಲಿಯ ತನಕ ಕೊರೊನಾ ಇರುತ್ತದೆಯೋ ಅಲ್ಲಿಯ ತನಕ ನಾವು ಹೋರಾಟ ಮಾಡಲೇಬೇಕು. ಅಂತಿಮವಾಗಿ ಒಂದಲ್ಲೊಂದು ದಿನ ಇದರಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನು ಅಶೋಕ್ ವ್ಯಕ್ತಪಡಿಸಿದರು.

ಕೊರೊನಾ ನಿಯಂತ್ರಿಸಲು ತೆಗೆದುಕೊಂಡಿರುವ ಕ್ರಮಗಳ ಕುರಿತಂತೆ ಪ್ರತಿದಿನ ನಾವು ಅಧಿಕಾರಿಗಳ ಜೊತೆ ಸಭೆ ನಡೆಸುತ್ತಲೇ ಇರುತ್ತೇವೆ. ಮುಖ್ಯಮಂತ್ರಿ ಹಾಗೂ ಕಾರ್ಯಪಡೆ ತಂಡ ಮಾಹಿತಿಯನ್ನು ಕಲೆ ಹಾಕುತ್ತಲೇ ಇರುತ್ತದೆ.  ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಾನು ಪತ್ರ ಬರೆದು ಎಚ್ಚರಿಕೆಯಿಂದ ಕೆಲಸ ಮಾಡಬೇಕೆಂದು ಸೂಚಿಸಿದ್ದೇನೆ.

ವಿಶೇಷವಾಗಿ ಕೊರೊನಾ ಸೋಂಕು ಹೆಚ್ಚಿರುವ ಕಲಬುರಗಿ ಜಿಲ್ಲೆಯಲ್ಲಿ ಜಾಗೃತೆಯಿಂದ ಇರುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಬೆಂಗಳೂರಿನಲ್ಲಿ ಯಾವ ಆಸ್ಪತ್ರೆಗಳಲ್ಲೂ ಆ್ಯಂಬುಲೆನ್ಸ್‍ಗಳ ಕೊರತೆ ಇಲ್ಲ. ಪ್ರತಿಯೊಂದು ವಾರ್ಡ್‍ಗಳಲ್ಲೂ ಒಂದೊಂದು ಆ್ಯಂಬುಲೆನ್ಸ್ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವಂತೆ ಸೂಚನೆ ಕೊಡಲಾಗಿದೆ.

ಕೆಲವು ಕಡೆ ಆ್ಯಂಬುಲೆನ್ಸ್ ಕೊರತೆಯಿಂದ ಟಿಟಿಗಳನ್ನು ಬಳಕೆ ಮಾಡಿದ್ದಾರೆ. ಅಂತಹ ಸ್ಥಳಗಳಲ್ಲಿ ನಮ್ಮ ಸಿಬ್ಬಂದಿ ಖುದ್ದು ಹಾಜರಿದ್ದು, ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಿಕೊಡಬೇಕು. ಒಂದು ವೇಳೆ ನಮ್ಮಿಂದ ಯಾವುದಾದರೂ ಸಣ್ಣಪುಟ್ಟ ತಪ್ಪುಗಳಾಗಿದ್ದರೆ ಅದನ್ನು ಸರಿಪಡಿಸುವುದಾಗಿ ಅಶೋಕ್‍ಸ್ಪಷ್ಟಪಡಿಸಿದರು.

ಕೆಲವು ವಾರ್ಡ್‍ಗಳಲ್ಲಿ ಎನ್‍ಜಿಒಗಳ ಜೊತೆ ಒಪ್ಪಂದ ಮಾಡಿಕೊಂಡು ಕೆಲಸ ಮಾಡುತ್ತಿದ್ದೇವೆ. ಕೊರೊನಾ ಪೀಡಿತರಿಗೆ ಎಲ್ಲಿಯೂ ತೊಂದರೆಯಾಗದಂತೆ ಸರ್ಕಾರ ಎಲ್ಲ ರೀತಿಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.

Facebook Comments