ಸಹಾಯ ಮಾಡಿದವರಿಗೆ ನೆರವಾಗುವುದು ನಮ್ಮ ಜವಾಬ್ದಾರಿ : ಅಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.13- ನಮಗೆ ಸಹಾಯ ಮಾಡಿದವರಿಗೆ ಯಾವುದೇ ರೀತಿಯಲ್ಲೂ ಲೋಪ ಆಗದ ರೀತಿಯಲ್ಲಿ ನೋಡಿಕೊಳ್ಳುತ್ತೇವೆ. ಅದು ನಮ್ಮ ಜವಾಬ್ದಾರಿ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹ ಶಾಸಕರ ಪ್ರಕರಣದ ತೀರ್ಪು ಸುಪ್ರೀಂಕೋರ್ಟ್ ನೀಡಿದೆ. ಅದನ್ನು ನಾವು ಸ್ವಾಗತಿಸುವುದಾಗಿ ಹೇಳಿದರು.

ಅನರ್ಹ ಶಾಸಕರ ಚುನಾವಣೆಗೆ ಅವಕಾಶ ಕಲ್ಪಿಸಿರುವುದರಿಂದ ಶಾಸಕರ ಆಯ್ಕೆಗೆ ಯಾವುದೇ ರೀತಿಯ ಅಡೆತಡೆ ಇಲ್ಲ. ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಮುಖ್ಯ ಎಂದ ಅವರು, ಚುನಾವಣಾ ಅಭ್ಯರ್ಥಿಗಳ ಕುರಿತಂತೆ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಚುನಾವಣೆಯಲ್ಲಿ ರಾಜೀನಾಮೆ ನೀಡಿರುವ ಶಾಸಕರನ್ನು ಅಭ್ಯರ್ಥಿಯಾಗಿಸಲು ಪರಿಗಣಿಸುತ್ತೇವೆ. 15 ಕ್ಷೇತ್ರಗಳಲ್ಲೂ ಸಿಎಂ ನೇತೃತ್ವದಲ್ಲಿ ಚುನಾವಣೆ ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್‍ನಲ್ಲಿ ಭಿನ್ನಮತ ಉಂಟಾಗಿದೆ. ಜೆಡಿಎಸ್ ಚುನಾವಣೆಗೆ ಸಿದ್ದತೆಯನ್ನೇ ಮಾಡಿಲ್ಲ. ವಿರೋಧ ಪಕ್ಷಗಳಲ್ಲಿ ಗೊಂದಲ ಇದೆ ಎಂದ ಅವರು, ಕಳೆದ ಮೂರು ತಿಂಗಳಿನಿಂದ ನಮ್ಮ ಸರ್ಕಾರ ಒಳ್ಳೆಯ ಕೆಲಸಗಳನ್ನು ಮಾಡಿದೆ. ಜನ ನಮ್ಮ ಕೈ ಹಿಡಿಯಲಿದ್ದಾರೆ ಎಂದರು.

ಇದೀಗ ಪಕ್ಷ ಸೇರ್ಪಡೆಗೂ ಅನರ್ಹರಿಗೆ ಯಾವುದೇ ಸಮಸ್ಯೆಯಿಲ್ಲ. ಈ ಬಗ್ಗೆ ಪಕ್ಷದ ವರಿಷ್ಠರು, ರಾಷ್ಟ್ರಾಧ್ಯಕ್ಷರು, ರಾಜ್ಯಾಧ್ಯಕ್ಷರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ನುಡಿದರು.
ಹೊಸಕೋಟೆ ಕ್ಷೇತ್ರದಲ್ಲಿನ ಭಿನ್ನಮತ ಕುರಿತಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಕುರಿತಂತೆ ಪಕ್ಷ ತೀರ್ಮಾನ ಕೈಗೊಳ್ಳಲಿದೆ. ಯಾರೂ ಪಕ್ಷ ಬಿಡುವುದಿಲ್ಲ.

ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮ ಪಕ್ಷ ಆಡಳಿತದಲ್ಲಿದೆ ಎಂದರು. ಕಾಂಗ್ರೆಸ್‍ನವರು ನಮಗೆ ನೈತಿಕ ಪಾಠ ಹೇಳುವ ಬದಲು ಅವರೇ ಮೊದಲು ಅದನ್ನು ಪಾಲನೆ ಮಾಡಲಿ. 60 ವರ್ಷಗಳ ಕಾಲ ಅಧಿಕಾರ ನಡೆಸಿದ ಅವರಿಂದಲೇ ಪಕ್ಷಾಂತರ ಆರಂಭವಾಗಿದೆ ಎಂದು ತಿರುಗೇಟು ನೀಡಿದರು.  ಹಣದ ಆಮಿಷ ಸೇರಿದಂತೆ ಪಕ್ಷಾಂತರವನ್ನು ಆರಂಭಿಸಿದ್ದರು. 100 ಜನ ಪಕ್ಷಾಂತರ ಮಾಡಿದ್ದಾರೆ ಎಂದು ಟೀಕಿಸಿದರು.

Facebook Comments