ಪೌರತ್ವ ಮಸೂದೆಯಿಂದ ದೇಶದ ಯಾರದೇ ಪೌರತ್ವ ಕಿತ್ತುಕೊಳ್ಳುವುದಿಲ್ಲ : ಅಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಜ.6- ಪೌರತ್ವ ತಿದ್ದುಪಡಿ ಮಸೂದೆ ಜಾರಿಯಿಂದ ಈ ದೇಶದ ಯಾರದೇ ಪೌರತ್ವ ಕಿತ್ತುಕೊಳ್ಳುವುದಿಲ್ಲ. ಮುಸ್ಲಿಮರು ಈ ದೇಶ ಬಿಟ್ಟು ಹೋಗಬೇಕಾಗಿಲ್ಲ. ಆದರೆ ಪಾಕಿಸ್ತಾನ, ಬಾಂಗ್ಲದಿಂದ ಬರುವವರಿಗೆ ಇಲ್ಲಿ ಅವಕಾಶವಿಲ್ಲ. ಈ ವಿಚಾರ ಕಾಂಗ್ರೆಸ್, ಕಮ್ಯೂನಿಸ್ಟ್ ಪಕ್ಷಗಳ ಮುಖಂಡರಿಗೂ ತಿಳಿದಿದೆ. ಆದರೂ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.

ನಗರದ 26ನೇ ವಾರ್ಡಿನ ಅಶೋಕ ನಗರದಲ್ಲಿ ಪೌರತ್ವ ಕಾಯ್ದೆ ಪರ ಮನೆಮನೆಗೆ ತೆರಳಿ ಪ್ರಚಾರ ಮಾಡುವ ಅಭಿಯಾನ ಉದ್ಘಾಟಿಸಿದ ಸಚಿವರು, ಯಾರೇ ವಿರೋಧ ಮಾಡಿದರೂ ಈ ಕಾಯ್ದೆ ಹಿಂಪಡೆಯುವುದಿಲ್ಲ, ಜಾರಿ ಮಾಡಿಯೇ ತೀರುತ್ತೇವೆ, ದೇಶದ ಜನರ ಸುರಕ್ಷತೆ, ಸೌಕರ್ಯಕ್ಕಾಗಿ ಜಾರಿಗೆ ತರುವ ಈ ಕಾಯ್ದೆಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾದ ಹಿಂದುಗಳು, ಜೈನರು ಸಿಕ್ಕರು, ಬೌದ್ಧರನ್ಮು ಎರಡನೇ ಪ್ರಜೆಗಳೆಂದು ಕಾಣಲಾಗುತ್ತಿದೆ.

ಈ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ, ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಸಹಿಸಲಾಗದೆ ಸಾವಿರಾರು ಜನ ಪಾಕಿಸ್ತಾನ ಬಿಟ್ಟು ಭಾರತಕ್ಕೆ ಬಂದು ಬೀದಿ ಬದಿ ವಾಸ ಮಾಡುತ್ತಿದ್ದಾರೆ. ಅವರಿಗೆ ರಕ್ಷಣೆ ನೀಡಿ, ಆಶ್ರಯ ಕೊಡಬೇಕು ಎನ್ನುವ ಕಾರಣಕ್ಕೆ ಈ ಹಿಂದೆ ಆಗಿನ ಪ್ರಧಾನಿ ಮನಮೋಹನ್‍ಸಿಂಗ್ ಅವರು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಪ್ರಸ್ತಾಪ ಮಾಡಿದ್ದರು, ಈಗ ಮೋದಿ ಸರ್ಕಾರ ಅದರ ಜಾರಿಗೆ ಮುಂದಾಗಿದೆ ಎಂದು ತಿಳಿಸಿದರು.

ಭಾರತದಲ್ಲಿ ವಾಸಿಸುವ ಮುಸ್ಲೀಮರು ಇಲ್ಲಿಯ ಪೌರರೇ, ಅವರನ್ನು ದೇಶ ಬಿಟ್ಟು ಓಡಿಸುವ ಉದ್ದೇಶದ ಕಾಯ್ದೆ ಇದಲ್ಲ. ನಮ್ಮ ದೇಶ ನಿವಾಸಿಗಳಿಗೆ ರಕ್ಷಣೆ ಸಿಗಬೇಕು, ಇಲ್ಲಿನವರಿಗೆ ಸೌಲಭ್ಯ ದೊರೆಯಬೇಕು ಎಂಬ ಆಶಯದ ಪೌರತ್ವ ಕಾಯ್ದೆ ಜಾರಿಯಾಗಬೇಕು. ಅಕ್ರಮವಾಗಿ ಬಂದು ಇಲ್ಲಿ ನೆಲೆಸುವವರು ನಮ್ಮ ತೆರಿಗೆ ಹಣದಿಂದ ಅನುಕೂಲ ಪಡೆಯುವುದನ್ನು ನಾವು ವಿರೋಧಿಸುತ್ತೇವೆ. ಬಾಂಗ್ಲಾ, ಪಾಕಿಸ್ತಾನದಿಂದ ಸುಮಾರು ಎರಡು ಕೋಟಿ ಜನ ಅಕ್ರಮವಾಗಿ ಬಂದು ಇಲ್ಲಿ ನೆಲೆಸಿದ್ದಾರೆ. ಅವರ ಜೊತೆ ಭಯೋತ್ಪಾದಕರೂ ಬಂದಿರಬಹುದು, ಅಂತಹವರಿಂದ ದೇಶದಲ್ಲಿ ಕೋಮುಗಲಭೆಗಳಾಗುತ್ತಿವೆ. ಅಂತಹವರು ದೇಶದಲ್ಲಿ ಇರಬೇಕಾ? ಎಂದು ಸಚಿವ ಅಶೋಕ್ ಪ್ರಶ್ನಿಸಿದರು.

ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಡಾ. ಎಂ.ಆರ್.ಹುಲಿನಾಯ್ಕರ್, ನಗರಪಾಲಿಕೆಯ 26ನೇ ವಾರ್ಡ್ ಸದಸ್ಯ ಮಲ್ಲಿಕಾರ್ಜುನ್ ಮತ್ತಿತರ ಮುಖಂಡರು ಹಾಜರಿದ್ದು, ಮನೆಮನೆಗೆ ತೆರಳಿ ಕರಪತ್ರ ಹಂಚಿ ಪೌರತ್ವ ಕಾಯ್ದೆ ಪರ ಅರಿವು ಮೂಡಿಸಿದರು.

Facebook Comments