ಭಾರತ್ ಬಂದ್ ಯಶಸ್ವಿಯಾಗುವುದಿಲ್ಲ : ಸಚಿವ ಅಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಬಳ್ಳಾಪುರ, ಜ.7-ನಾಳೆ ಕರೆ ನೀಡಲಾಗಿರುವ ಬಂದ್‍ಗೆ ಬಹಳಷ್ಟು ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಹಾಗಾಗಿ ಬಂದ್ ಯಶಸ್ವಿಯಾಗುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಬೇಡಿಕಗಳನ್ನು ಮುಂದಿಟ್ಟುಕೊಂಡು ಸಂಘಟನೆಗಳು ಬಂದ್‍ಗೆ ಕರೆ ನೀಡಿವೆ. ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ನಡೆಸಲು ನಮ್ಮ ವಿರೋಧ ಇಲ್ಲ. ಆದರೆ ಬಂದ್‍ಗೆ ಕರೆ ನೀಡಿರುವುದು ಕಾನೂನುಬಾಹಿರ.

ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‍ಗಳು ಈಗಾಗಲೇ ಬಂದ್ ನಡೆಸಲು ಅವಕಾಶ ಇಲ್ಲ ಎಂದು ತೀರ್ಪು ನೀಡಿವೆ. ಈ ಸಂದರ್ಭದಲ್ಲಿ ಬಂದ್‍ಗೆ ಕರೆ ನೀಡಿರುವುದು ಉಚಿತವಲ್ಲ ಎಂದು ಹೇಳಿದರು. ಕೆಲವು ಸಂಘಟನೆಗಳು ಬಂದ್‍ನ್ನು ವಿರೋಧಿಸಿವೆ. ತಮ್ಮ ಬೇಡಿಕೆಗಳಿಗಾಗಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿವೆ. ಪ್ರತಿಭಟನೆ ನಡೆಸಲು ಅಗತ್ಯವಾದ ಬಂದೋಬಸ್ತ್ ಸೇರಿದಂತೆ ಎಲ್ಲ ಅನುಕೂಲಗಳನ್ನು ಸರ್ಕಾರ ಮಾಡಿಕೊಡಲಿದೆ. ಬಂದ್ ಆಚರಣೆ ಮಾಡಿದರೆ ಬಲವಂತವಾಗಿ ಅಂಗಡಿ, ಮುಂಗಟ್ಟುಗಳ ಮುಚ್ಚಿಸಲು ಪ್ರಯತ್ನಿಸಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಜೆಎನ್‍ಯುನಲ್ಲಿ ಗಲಭೆ ಕಮ್ಯುನಿಷ್ಟ್ ಪ್ರೇರಿತ ಎಂದು ಅವರು ಗಂಭೀರ ಆರೋಪ ಮಾಡಿದರು. ಕಾಲೇಜು ಆವರಣದಲ್ಲಿ ದಾದಾಗಿರಿಗೆ ಅವಕಾಶವಾಗುವಂತೆ ಅಲ್ಲಿನ ಎಡಪಕ್ಷಗಳ ಸಂಘಟನೆಗಳು ವರ್ತಿಸುತ್ತಿವೆ. ಈ ಹಿಂದೆ ದೇಶ ವಿರೋಧಿ ಘೋಷಣೆಗಳನ್ನು ಕೂಗಿದ್ದು ಕೂಡ ಜೆಎನ್‍ಯುನಲ್ಲೇ. ಕನ್ಹಯ್ಯಕುಮಾರ್ ಮತ್ತಿತರ ವಿರುದ್ಧ ಘೋಷಣೆ ಕೂಗಿದ್ದಾಗಿ ಪ್ರಕರಣ ಕೂಡ ದಾಖಲಾಗಿತ್ತು ಎಂದು ಹೇಳಿದರು.

ಜೆಎನ್‍ಯು ಗಲಭೆಯಲ್ಲಿ ಎಬಿವಿಪಿ ಕೈವಾಡ ಇಲ್ಲ. ಅದು ಸಂಪೂರ್ಣ ಕಮ್ಯುನಿಸ್ಟ್ ಪಕ್ಷಗಳ ಪ್ರೇರಿತ ಗಲಭೆ. ಶಾಲಾ ಕಾಲೇಜುಗಳ ಆವರಣವನ್ನು ದೊಂಬಿ ಮಾಡಲು ಬಳಸುತ್ತಿರುವುದು ವಿಷಾದನೀಯ ಎಂದರು. ಬಿಜೆಪಿಗೆ ಬಂದಂತಹ ಜೆಡಿಎಸ್, ಕಾಂಗ್ರೆಸ್‍ನ ಶಾಸಕರಿಗೆ ಶೀಘ್ರವೇ ಸಂಪುಟ ವಿಸ್ತರಣೆ ಮಾಡಿ ಸಚಿವ ಸ್ಥಾನ ನೀಡಲಾಗುವುದು. ನಾವುಭರವಸೆ ಕೊಟ್ಟಂತೆ ನಡೆದುಕೊಳ್ಳುತ್ತೇವೆ. ಮುಖ್ಯಮಂತ್ರಿ ಯಡಿಯೂರಪ್ಪ ಶೀಘ್ರವೇ ದೆಹಲಿಗೆ ತೆರಳಿ ವರಿಷ್ಠರ ಜೊತೆ ಚರ್ಚೆ ಮಾಡಿ ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂದು ಹೇಳಿದರು.

Facebook Comments