ಶಾಸಕರ ಆಪ್ತ ಸಹಾಯಕರಿಗೆ ಶೀಘ್ರದಲ್ಲಿ ಬಾಕಿ ವೇತನ ಪಾವತಿ : ಸಚಿವ ಅಶೋಕ್ ಭರವಸೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.16- ಶಾಸಕರ ಆಪ್ತ ಸಹಾಯಕರಿಗೆ ಮೂರ್ನಾಲ್ಕು ದಿನಗಳಲ್ಲಿ ಬಾಕಿ ವೇತನ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು. ಇನ್ನು ಮುಂದೆ ಶಾಸಕರ ಖಾತೆ ಮೂಲಕವೇ ಸಿಬ್ಬಂದಿಗಳಿಗೆ ವೇತನ ಪಾವತಿಸುವ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಭರವಸೆ ನೀಡಿದರು.

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‍ನ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಮಾತನಾಡಿ, ವಿಧಾನಸಭೆ ಸದಸ್ಯರಿಗೆ ಸರ್ಕಾರಿ ಇಲಾಖೆ ಹಾಗೂ ಸಂಸ್ಥೆ ವತಿಯಿಂದ ಆಪ್ತ ಸಹಾಯಕರನ್ನು ಒದಗಿಸಲಾಗಿದೆ. ಅವರಿಗೆ ನಾಲ್ಕೈದು ತಿಂಗಳುಗಳಿಂದ ವೇತನ ಪಾವತಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಗ ಉತ್ತರ ನೀಡಿದ ಸಚಿವರು, ಖಜಾನೆ-2 ತಂತ್ರಾಂಶ ಈ ಮೊದಲು ವಿಧಾನಮಂಡಲದ ಕಾರ್ಯಾಲಯದ ವ್ಯಾಪ್ತಿಗೆ ಒಳಪಡುತಿತ್ತು. ಈಗ ಕಂದಾಯ ಇಲಾಖೆಗೆ ಒಳಪಟ್ಟಿದೆ. ತಾಂತ್ರಿಕ ಸಮಸ್ಯೆಗಳಿಂದಾಗಿ ವೇತನ ಬಿಡುಗಡೆಯಲ್ಲಿ ವಿಳಂಬವಾಗಿದೆ. ಲೆಕ್ಕ ಶೀರ್ಷಿಕೆಯನ್ನು ಸರಿಪಡಿಸಿಕೊಂಡು ಶೀಘ್ರವೇ ವೇತನ ಪಾವತಿ ಮಾಡಲಾಗುತ್ತದೆ.

ಜನವರಿಯವರೆಗೂ ಯಾವುದೇ ವೇತನ ಬಾಕಿ ಉಳಿಸಿಕೊಂಡಿಲ್ಲ ಎಂದರು. ಇನ್ನು ಮುಂದೆ ಆಪ್ತ ಸಹಾಯಕರಿಗೂ ವೇತನವನ್ನು ಶಾಸಕರ ಖಾತೆಗೆ ರವಾನಿಸಲಾಗುತ್ತದೆ. ಅಲ್ಲಿಂದ ಅವರು ವೇತನ ಹಂಚಿಕೆ ಮಾಡುವ ವ್ಯವಸ್ಥೆ ಜಾರಿಗೆ ತರುವ ಕೆಲಸ ನಡೆದಿದೆ ಎಂದರು.

Facebook Comments