ಜೂನ್ 1 ರಿಂದ ಓಪನ್ ಆಗುತ್ತಾ ಬಾರ್ ಅಂಡ್ ರೆಸ್ಟೋರೆಂಟ್..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 28- ರಾಜ್ಯದಲ್ಲಿ ಲಾಕ್‍ಡೌನ್ ಜಾರಿಯಿಂದ ಮುಚ್ಚಿರುವ ಹೊಟೇಲ್‍ಗಳನ್ನು ಜೂನ್ 1ರಿಂದ ತೆರೆಯಲು ಸರ್ಕಾರ ಮುಂದಾಗಿದೆ.  ಕೇಂದ್ರ ಸರ್ಕಾರದ 5ನೆ ಲಾಕ್‍ಡೌನ್ ಘೋಷಣೆಯಾದ ನಂತರ ಬಿಡುಗಡೆಯಾಗಲಿರುವ ಮಾರ್ಗಸೂಚಿಗಳನ್ನು ನೋಡಿಕೊಂಡು ನಂತರ ಹೊಟೇಲ್‍ಗಳನ್ನು ತೆರೆಯಲು ಅವಕಾಶ ನೀಡುವ ಸಾಧ್ಯತೆ ನಿಚ್ಚಳವಾಗಿದೆ.

ಬೆಂಗಳೂರಿನಲ್ಲಿ ಈ ಬಗ್ಗೆ ಸುಳಿವು ನೀಡಿರುವ ಕಂದಾಯ ಸಚಿವ ಆರ್.ಅಶೋಕ್, ಜೂನ್ 1ರಿಂದ ಹೊಟೇಲ್‍ಗಳನ್ನು ಪ್ರಾರಂಭಿಸಲು ಅವಕಾಶ ನೀಡಲು ಸರ್ಕಾರ ಮುಕ್ತ ಮನಸ್ಸು ಹೊಂದಿದೆ. ಕೇಂದ್ರ ಸರ್ಕಾರದ ನಿರ್ದೇಶನದ ನಂತರ ತೀರ್ಮಾನಿಸುವುದಾಗಿ ಸ್ಪಷ್ಟಪಡಿಸಿದರು.

ನಾವು ಹೊಟೇಲ್‍ಗಳನ್ನು ಪುನರಾರಂಭಿಸಲು ಮುಕ್ತ ಮನಸ್ಸು ಹೊಂದಿದ್ದೇವೆ. ಇದು ಕೇಂದ್ರದ ನಿರ್ಧಾರವಾಗಿರುವುದರಿಂದ ಅಲ್ಲಿನ ಮಾರ್ಗಸೂಚಿ ಪ್ರಕಾರವೇ ನಡೆದುಕೊಳ್ಳಬೇಕಾಗುತ್ತದೆ. ಮೊದಲು ಹೊಟೇಲ್‍ಗಳು ಪ್ರಾರಂಭವಾದರೂ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಅವಕಾಶ ಕೊಡುವುದಿಲ್ಲ ಎಂದು ಹೇಳಿದರು.

ಎಲ್ಲ ಚಟುವಟಿಕೆಗಳು ಆರಂಭವಾದರೂ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಅವಕಾಶ ಕೊಡುವುದಿಲ್ಲ. ಅದೇ ರೀತಿ ಜಿಮ್‍ಗಳು ಸಹ ಸದ್ಯಕ್ಕೆ ಆರಂಭವಾಗುವುದಿಲ್ಲ ಎಂದು ತಿಳಿಸಿದರು. ಕೇಂದ್ರ ಸರ್ಕಾರ ಯಾವ ರೀತಿ ಮಾರ್ಗಸೂಚಿಯನ್ನು ಪಾಲನೆ ಮಾಡಬೇಕೆಂದು ಸೂಚನೆ ಕೊಡುತ್ತದೆಯೋ ಅದರಂತೆ ನಡೆದುಕೊಳ್ಳುತ್ತೇವೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅಶೋಕ್ ಪುನರುಚ್ಚರಿಸಿದರು.

ಕೊರೊನಾ ನಿಯಂತ್ರಿಸುವುದು ಒಂದು ಕಡೆಯಾದರೆ, ಜನಜೀವನ ಸಹಜ ಸ್ಥಿತಿಗೆ ತರುವುದು ಮತ್ತೊಂದು ಸವಾಲಾಗಿದೆ. ಜನಹಿತಕ್ಕಾಗಿ ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ ಎಂದರು. ಜಮೀನುಗಳ ಮೌಲ್ಯಮಾಪನದ ವೇಳೆ ಜಮೀನಿನ ನೋಂದಣಿ ಮೊತ್ತ ಹೆಚ್ಚಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ನಿವೇಶನ, ಮನೆ ಖರೀದಿಗೆ ಉತ್ತೇಜನ ನೀಡುವ ಸಂಬಂಧ ನೋಂದಣಿ ಶುಲ್ಕವನ್ನು ಕಡಿಮೆ ಮಾಡಲು ಯೋಜನೆ ರೂಪಿಸುತ್ತಿದ್ದೇವೆ. ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.

ವಾಗ್ದಾಳಿ: ಇನ್ನು ಯಲಹಂಕ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರಿಡುವ ಸಂಬಂಧ ಉಂಟಾಗಿರುವ ವಿವಾದ ಕುರಿತಂತೆ ಪ್ರತಿಪಕ್ಷದ ವಿರುದ್ಧ ಅಶೋಕ್ ವಾಗ್ದಾಳಿ ನಡೆಸಿದರು.
ಯಾರು ಎಷ್ಟೇ ಪ್ರತಿರೋಧ ತೋರಿಸಿದರೂ ಈಗಾಗಲೇ ತೆಗೆದುಕೊಂಡಿರುವ ತೀರ್ಮಾನದಂತೆ ಅಲ್ಲಿನ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರು ನಾಮಕರಣ ಮಾಡಿಯೇ ಮಾಡುತ್ತೇವೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಈಗ ಕನ್ನಡಿಗರ ಹೆಸರು ನೆನಪಾಗಿದೆ. ಹಿಂದೆ ನಾಡಪ್ರಭು ಕೆಂಪೇಗೌಡ, ಸಂಗೊಳ್ಳಿ ರಾಯಣ್ಣ ಹೆಸರುಗಳು ಅವರ ನೆನಪಿಗೆ ಬರಲಿಲ್ಲವೆ ಎಂದು ಪ್ರಶ್ನಿಸಿದರು.  ಕಾಂಗ್ರೆಸ್‍ನ ಗೊಡ್ಡು ಬೆದರಿಕೆಗೆ ಬೆದರುವ ಪ್ರಶ್ನೆಯೇ ಇಲ್ಲ. ಈಗಾಗಲೇ ಸರ್ಕಾರ ತೀರ್ಮಾನಿಸಿರುವಂತೆ ಯಲಹಂಕ ಮೇಲ್ಸೇತುವೆಗೆ ಕೆಲವೇ ದಿನಗಳಲ್ಲಿ ವೀರ ಸಾವರ್ಕರ್ ಹೆಸರು ಇಟ್ಟೇ ಇಡುತ್ತೇವೆ. ಯಾವುದೋ ಒಂದು ಕಾರಣಕ್ಕಾಗಿ ವಿರೋಧಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ವೀರ ಸಾವರ್ಕರ್ ಒಬ್ಬ ಅಪ್ಪಟ ಸ್ವತಂತ್ರ ಹೋರಾಟಗಾರ. ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ 25 ವರ್ಷ ಸೆರೆವಾಸ ಅನುಭವಿಸಿದ್ದಾರೆ. ಹಿಂದೂ ಪ್ರತಿಪಾದಕರಾಗಿದ್ದೇ ತಪ್ಪೆ ಎಂದು ಪ್ರಶ್ನಿಸಿದರು. ದೇಶದಲ್ಲಿ ಪ್ರತಿಯೊಂದಕ್ಕೂ ಇಂದಿರಾಗಾಂಧಿ, ರಾಜೀವ್‍ಗಾಂಧಿ ಹೆಸರಿಟ್ಟರೆ ಯಾವ ತಕರಾರೂ ಬರುವುದಿಲ್ಲ. ಇಂದಿರಾಗಾಂಧಿ ಸಂತತಿ ಹೆಸರು ಇಟ್ಟರೆ ಅವರಿಗೆ ಹಬ್ಬ. ಬೇರೆ ಹೆಸರು ಇಟ್ಟರೆ ಮೆಣಸಿಕಾಯಿ ಇಟ್ಟಂತಾಗುತ್ತದೆ ಎಂದು ವ್ಯಂಗ್ಯವಾಡಿದರು.

Facebook Comments