“ಮಳೆಯಿಂದ ಬಿದ್ದ ಮರಗಳನ್ನು ತಕ್ಷಣವೇ ತೆರವುಗೊಳಿಸದಿದ್ದರೆ ಅಧಿಕಾರಿಗಳ ತಲೆ ತಂಡ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 30- ನಗರದಲ್ಲಿ ಬಿದ್ದಿರುವ ಮರಗಳನ್ನು ತಕ್ಷಣವೇ ತೆರವುಗೊಳಿಸುವುದು ಹಾಗೂ ಚೆರಂಡಿಗಳ ಸ್ಲ್ಯಾಬ್‍ಗಳನ್ನು ಸರಿಪಡಿಸದಿದ್ದರೆ ಸಹಾಯಕ ಕಾರ್ಯಪಾಲಕ ಅಭಿಯಂತರ(ಎಇಇ)ರ ತಲೆ ತಂಡ ಖಚಿತ ಎಂದು ಕಂದಾಯ ಸಚಿವ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೂಡಲೇ ನಗರದಲ್ಲಿ ಬಿದ್ದಿರುವ ಮರಗಳನ್ನು ತೆರವುಗೊಳಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ಎಲ್ಲಿಯೂ ಕೂಡ ಒಂದೇ ಒಂದು ರೆಂಬೆ ಬಿದ್ದಿರಬಾರದು. ಕೂಡಲೇ ಅಧಿಕಾರಿಗಳು ಕಾರ್ಯೋನ್ಮುಖರಾಗಿ ತೆರವುಗೊಳಿಸಬೇಕು. ಉದಾಸೀನ ತೋರುವ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲಿ ಟಾಸ್ಕ್‍ಪೊರ್ಸ್ ರಚನೆ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.ಇದರಿಂದ ಮಳೆಗಾಲದಲ್ಲಿ ಸಂಭವಿಸುವ ಅನಾಹುತವನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸೋಮವಾರ ಪುನಃ ವಿಪತ್ತು ನಿರ್ವಹಣಾ ಸಭೆ ನಡೆಯಲಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ಮಾಡಲಿದ್ದೇವೆ. ಈ ಬಾರಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪಾಲಿಕೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಹೇಳಿದರು. ಬುಧವಾರ ಅಥವಾ ಗುರುವಾರ ಸಿಎಂ ಯಡಿಯೂರಪ್ಪ ಅವರು ಬೆಂಗಳೂರು ಪ್ರದಕ್ಷಿಣೆ ಮಾಡಲಿದ್ದಾರೆ.

ಮಳೆ ಬಂದಾಗ ಉಂಟಾಗಬಹುದಾದ ಅನಾಹುತವನ್ನು ತಡೆಗಟ್ಟಲು ಅಧಿಕಾರಿಗಳಿಗೆ ಸೂಚನೆ ಕೊಡುವರು. ಚರಂಡಿಯಲ್ಲಿ ಸಂಗ್ರಹವಾಗಿರುವ ಹೂಳು ತೆಗೆಯುವುದು, ರಾಜಕಾಲುವೆಯನ್ನು ಸ್ವಚ್ಛಗೊಳಿಸುವುದು ನಮ್ಮ ಮುಂದಿರುವ ಸವಾಲು ಎಂದರು.

# ಕ್ರಮಕ್ಕೆ ಆಗ್ರಹ:
ಇನ್ನು ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷಾಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿರುವುದು ಈಗಾಗಲೇ ದೃಢಪಟ್ಟಿದೆ. ಆತ ಆರೋಗ್ಯ ತಪಾಸಣೆಗೆ ಸಹಕಾರ ಕೊಡುತ್ತಿಲ್ಲ ಎಂಬ ಆಪಾದನೆಗಳು ಕೇಳಿ ಬಂದಿವೆ. ಅಧಿಕಾರಿಗಳು ತಕ್ಷಣವೇ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅಶೋಕ್ ಆಗ್ರಹಿಸಿದರು.

ಯಾರೇ ಆಗಲಿ ಕೊರೊನಾ ಪಾಸಿಟಿವ್ ದೃಢಪಟ್ಟ ಮೇಲೆ ಅಧಿಕಾರಿಗಳಿಗೆ ಸಹಕಾರ ನೀಡಬೇಕು. ಆದರೆ, ಇಮ್ರಾನ್ ಪಾಷಾ ಮೊದಲಿನಿಂದಲೂ ಉಡಾಫೆ ತರ ವರ್ತಿಸುತ್ತಿದ್ದಾರೆ. ಪಾಸಿಟಿವ್ ಕಂಡು ಮೇಲೆಯೂ ಅವರು ವಾರ್ಡ್‍ಗಳಲ್ಲಿ ತಿರುಗಾಟ ನಡೆಸಿರುವುದು ಕಂಡು ಬಂದಿದೆ.

ಅಧಿಕಾರಿಗಳಿಗೆ ಸರಿಯಾದ ಸಹಕಾರ ಕೊಡದಿದ್ದರೆ ಆತನ ಮೇಲೆ ಕ್ರಮ ಜರುಗಿಸಲೇಬೇಕು. ತರ್ಲೆ ರೀತಿ ವರ್ತಿಸಿದರೆ ಹಿಂದು-ಮುಂದು ನೋಡದೆ ಕಾನೂನಿನ ಪ್ರಕಾರ ಕ್ರಮ ಜರುಗಿಸಲಿ ಎಂದು ಒತ್ತಾಯಿಸಿದರು.

Facebook Comments