ಶೀಘ್ರದಲ್ಲೇ ಅಕ್ರಮ-ಸಕ್ರಮ ಯೋಜನೆ ಜಾರಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.13- ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಗಳನ್ನು ಕಾನೂನುಬದ್ಧವಾಗಿ ಸಕ್ರಮಗೊಳಿಸುವ ಕರ್ನಾಟಕ ಗ್ರಾಮೀಣ ಯೋಜನಾ ಕಾಯ್ದೆಗೆ ಶೀಘ್ರದಲ್ಲೇ ಬದಲಾವಣೆ ಮಾಡಲಿದ್ದೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಯ್ದೆಗೆ ತಿದ್ದುಪಡಿ ಮಾಡುವ ಸಂಬಂಧ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿ ನೀಡುವ ವರದಿ ಆಧಾರದಲ್ಲಿ ಕಾನೂನಿಗೆ ತಿದ್ದುಪಡಿ ತಂದು ಅಕ್ರಮ, ಸಕ್ರಮ ಕಾಯ್ದೆಯನ್ನು ರಾಜ್ಯಾದ್ಯಂತ ಜಾರಿ ಮಾಡುವುದಾಗಿ ತಿಳಿಸಿದರು.

ಕರ್ನಾಟಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಲು ಹೊರಟಿರುವ ಉದ್ದೇಶದಲ್ಲಿ ರೈತರ ಹಿತಾಸಕ್ತಿ ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಕಾಯ್ದೆ ತಿದ್ದುಪಡಿಯಾದ ಯಾರೊಬ್ಬರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಅಶೋಕ್ ಸ್ಪಷ್ಟಪಡಿಸಿದರು.  ದೇಶದ ಯಾವುದೇ ರಾಜ್ಯಗಳಲ್ಲು ಇರದ ನಿಬಂಧನೆಗಳು ನಮ್ಮ ರಾಜ್ಯದಲ್ಲಿ ಇದ್ದರು.

ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ಸದುದ್ದೇಶದಿಂದಲೇ ಈಕಾಯ್ದೆಯನ್ನು ತಿದ್ದುಪಡಿ ಮಾಡಲು ಸರ್ಕಾರ ತೀರ್ಮಾನಿಸಿದೆ.ಇದಕ್ಕೆ ಪ್ರತಿಪಕ್ಷಗಳು ಸಹಕಾರ ನೀಡಬೇಕೆಂದು ಅಶೋಕ್ ಮನವಿ ಮಾಡಿದರು.

ಮೊಸರಲ್ಲಿ ಕಲ್ಲು ಹುಡುಕುವ ಚಾಳಿಯನ್ನು ಕಾಂಗ್ರೆಸ್ ನಾಯಕರು ಬಿಡಬೇಕು. ಅವರು ಅಧಿಕಾರದಲ್ಲಿದ್ದಾಗ ಕಾಯ್ದೆಗೆ ತಿದ್ದುಪಡಿ ಮಾಡಲು ಮುಂದಾಗಿದ್ದರು ಎಂಬುದನ್ನು ಮರೆಯಬಾರದು ಎಂದು ತಿರುಗೇಟು ನೀಡಿದರು.  ಕಾಯ್ದೆಯನ್ನು ಬೇರೆ ಬೇರೆ ರಾಜ್ಯಗಳಲ್ಲಿ ಸರಳೀಕರಣ ಮಾಡಿದ್ದರಿಂದಲೇ ಅವರು ನಮ್ಮಗಿಂತಲೂ ಕೃಷಿಯಲ್ಲಿ ಸಾಕಷ್ಟು ಮುಂದೆ ಹೋಗಿದ್ದಾರೆ.

ತಿದ್ದುಪಡಿ ಮಾಡುವುದರಿಂದ ರೈತರ ಜಮೀನನ್ನು ಕಬಳಿಸುವ ಇಲ್ಲವೇ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶ ಇದರಲ್ಲಿ ಅಡಗಿಲ್ಲ ಎಂದು ಹೇಳಿದರು.

ರಾಜ್ಯದ ಐಟಿ ಬಿಟಿ ಜನರು ಇಲ್ಲಿನ ಕಾನೂನಿ ನಿಂದ ಭೂಮಿ ಖರೀದಿಸಲು ಸಾಧ್ಯವಾಗದೆ ನೆರೆ ರಾಜ್ಯಗಳಿಗೆ ಹೋಗಿ ಖರೀದಿ ಮಾಡುತ್ತಿದ್ದಾರೆ. ಬೇರೆ ರಾಜ್ಯಗಳ ಜೊತೆ ಸ್ಪರ್ಧೆ ಮಾಡಬೇಕಾದರೆ ನಾವು ಕೈಕಟ್ಟಿಕೊಂಡು ಕೂರಲು ಸಾಧ್ಯವಿಲ್ಲ . ಭೂಸುಧಾರಣಾ ಕಾಯ್ದೆಯ ತಿದ್ದುಪಡಿಯ ಸುಗ್ರೀವಾಜ್ಞಾಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು ರಾಜ್ಯಪಾಲರಿಗೆ ಕಳುಹಿಸಲಾಗುವುದು ಎಂದರು.

ಎಸಿ, ತಹಶೀಲ್ದಾರ್ ಕಚೇರಿಯಲ್ಲಿ ಜನರಿಗೆ ಆಗುತ್ತಿದ್ದ ಕಿರುಕುಳವನ್ನು ತಪ್ಪಿಸುವ ಉದ್ದೇಶದಿಂದ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುತ್ತಿದ್ದೇವೆ. ರಾಜ್ಯದಲ್ಲಿ 11.79 ಲಕ್ಷ ಹೆಕ್ಟೇರ್ ಭೂಮಿ ಪಾಳು ಬಿದ್ದಿದೆ. ಇದರಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿಲ್ಲ, ಅಲ್ಲಿ ವ್ಯವಸಾಯ ಮಾಡುತ್ತಿಲ್ಲ. ಆದರೆ ಈಗ ಕೃಷಿಗೆ ಬರುವ ಆಸಕ್ತಿ ಇರುವವರಿಗೆ ಇನ್ನು ಮುಂದೆ ಅವಕಾಶ ಸಿಗಲಿದೆ.

ಅಲ್ಲದೇ, ಐಟಿ-ಬಿಟಿ ಜನರು ಕೂಡಾ ಕೃಷಿ ಯೆಡೆಗೆ ಆಸಕ್ತಿ ತಳೆಯುತ್ತಿದ್ದಾರೆ. ಇದರಿಂದ ಅವರಿಗೂ ಸೂಕ್ತ ಅವಕಾಶ ಸಿಗಲಿದೆ. ಪರಿಣಾಮ ಕೃಷಿ ಉತ್ಪನ್ನವೂ ಹೆಚ್ಚಾಗಲಿದೆ. ಹಾಗಾಗಿ ಹಳ್ಳಿಗೆ ಹೋಗಿ ನೇಗಿಲಯೋಗಿ ಆಗಿ ಎನ್ನುವ ಘೋಷವಾಕ್ಯದೊಂದಿಗೆ ಯೋಜನೆ ಜಾರಿಗೊಳಿಸುತ್ತಿದ್ದೇವೆ.

ಕಾಂಗ್ರೆಸ್‍ನಲ್ಲಿ ಈಗ ನಾಯಕತ್ವಕ್ಕಾಗಿ ಪೈಪೋಟಿ ಆರಂಭವಾಗಿದೆ. ಯಾರು ಮೊದಲು ಹೇಳಿಕೆ ಕೊಡಬೇಕೆಂದು ಅವರಲ್ಲೇ ಗೊಂದಲ ಇದೆ. ಸಿದ್ದರಾಮಯ್ಯ ಒಂದು ರೀತಿ ಹೇಳಿಕೆ ಕೊಟ್ಟರೆ ಅದಕ್ಕೆ ಪ್ರತಿಯಾಗಿ ಡಿ.ಕೆ.ಶಿವಕುಮಾರ್ ಮತ್ತೊಂದು ಹೇಳುತ್ತಾರೆ. ಕಾಂಗ್ರೆಸ್ ಮೊದಲು ತಮ್ಮಲ್ಲಿರುವ ಗೊಂದಲಗಳನ್ನು ಪರಿಹರಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಸಚಿವ ಸಿ.ಟಿ.ರವಿ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಸಿ.ಟಿ.ರವಿ ನನ್ನ ತಮ್ಮ ಇದ್ದ ಹಾಗೆ. ಕಾರ್ಯಕರ್ತರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡಬೇಕೆಂಬುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಕಾರ್ಯಕರ್ತರು ಪಕ್ಷಕ್ಕೆ ಆಧಾರಸ್ತಂಭ. ಅವರ ಹೇಳಿಕೆಯನ್ನು ನಾನೂ ಬೆಂಬಲಿಸುತ್ತೇನೆ ಎಂದು ಹೇಳಿದರು.

Facebook Comments