ಸೋಲಿನ ಭೀತಿಯಿಂದ ಕಾಂಗ್ರೆಸ್ ‘ಪ್ರೊಟೆಸ್ಟ್ ರಾಜಕಾರಣ’ ಮಾಡುತ್ತಿದೆ : ಅಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.28- ಕಾಂಗ್ರೆಸ್ ಸೋಲಿನ ಭೀತಿಯಿಂದ ಪ್ರೊಟೆಸ್ಟ್ ರಾಜಕಾರಣ ಮಾಡುತ್ತಿದೆ. ಆದರೆ ಬಿಜೆಪಿ ಅಭಿವೃದ್ಧಿ ರಾಜಕೀಯ ಮಾಡುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಟೀಕಿಸಿದ್ದಾರೆ. ಜಂಟಿ ಪತ್ರಿಕೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಶಸ್ತ್ರ ತ್ಯಾಗ ಮಾಡಿ ಸೋಲು ಒಪ್ಪಿಕೊಂಡಿದ್ದಾರೆ ಎಂದ ಅವರು, ನಿಮ್ಮನ್ನು ಯಾರು ಜಾತಿ ಬಗ್ಗೆ ಪ್ರಶ್ನೆ ಮಾಡಿಲ್ಲ.

ಆದ್ರೆ ನೀವು ಈಗ ನಾನು ಒಕ್ಕಲಿಗ.. ಒಕ್ಕಲಿಗ ಅಂತಿರಲ್ಲಾ ಒಂದು ವರ್ಷದ ಹಿಂದೆ ಕಪಾಲಿ ಬೆಟ್ಟ ಒಡೆದು ವೆಟಿಕನ್ ಸಿಟಿ ಮಾಡಲು ಹೊರಟಿದ್ರಲ್ಲ . ಆಗ ನೀವು ಒಕ್ಕಲಿಗ ಎನ್ನೋದು ಮರೆತು ಹೋಗಿತ್ತಾ? ಎಂದು ಪ್ರಶ್ನಿಸಿದರು.

ನೀವು ಮೊದಲು ವೆಟಿಕನ್ ಸಿಟಿಯಲ್ಲಿ ಬಾಲಗಂಗಾಧರ ನಾಥ್ ಸ್ವಾಮೀಜಿ ಪ್ರತಿಮೆ ಮಾಡಿ ಬಳಿಕ ಕಪಾಲಿ ಬೆಟ್ಟದಲ್ಲಿ ಯೇಸು ಪ್ರತಿಮೆ ಮಾಡುವೀರಂತೆ ಎಂದು ಛೇಡಿಸಿದರು. ಡಿಕೆಶಿ ಅವರಿಗೆ ಯೇಸು ಪ್ರತಿಮೆ ಮಾಡಲು ಅಲ್ಲಿ ಜಾಗ ನೀಡಿದವರು ಯಾರು? ಕಪಾಲಿ ಬೆಟ್ಟವೊ, ಅದು ಯೇಸು ಬೆಟ್ಟವೊ ನೀವೆ ಹೇಳಿ ಬಿಡಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಬೀಳಿಸಿದ್ದು ಸಿದ್ದರಾಮಯ್ಯ ಎಂದು ಖುದ್ದು ದೇವೆಗೌಡರೇ ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೂಡ ಇದೇ ಮಾತನ್ನು ಹೇಳುತ್ತಿದ್ದಾರೆ. ಈ ಬಗ್ಗೆ ಡಿ.ಕೆ.ಶಿವಕುಮಾರ್ ಅವರು ಏಕೆ ಮೌನವಾಗಿದ್ದಾರೆ. ಡಿ.ಕೆ.ಶಿವಕುಮಾರ್ ನೀವೇನು ಸಿದ್ದರಾಮಯ್ಯನವರ ವಿರೋಧಿನಾ? ಎಂದು ಟಾಂಗ್ ನೀಡಿದರು.

ಆರ್‍ಆರ್‍ನಗರ ಮತ್ತು ಶಿರಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ಈ ಮೂಲಕ ಕಾಂಗ್ರೆಸ್ ಬುಡವನ್ನೆ ಅಲ್ಲಾಡಿಸುವ ಕೆಲಸವನ್ನು ಮಾಡಲಿದೆ ಎಂದರು. ಡಿ.ಕೆ.ಶಿವಕುಮಾರ್ ಅವರು ಮಾತೆತ್ತಿದರೆ ವಿಧಾನಸೌಧಕ್ಕೆ ಚಪ್ಪಡಿಕಲ್ಲು ಆಗ್ತೇನೆ ಎನ್ನುತ್ತಾರೆ. ಮುಂದೊಂದು ದಿನ ಡಿಕೆಶಿ ಅಂತವರು ಬರಬಹುದು ಎಂದು ಕೆಂಗಲ್ ಹನುಮಂತಯ್ಯನವರು ಯೋಚಿಸಿದ್ದರೋ ಏನೋ ಗೊತ್ತಿಲ್ಲ. ಹಾಗಾಗಿ ವಿಧಾನಸೌಧಕ್ಕೆ ಮೊದಲೆ ನಾಲ್ಕು ದಿಕ್ಕಿಗೆ ನಾಲ್ಕು ಬಾಗಿಲು ಮಾಡಿ ಡಿಕೆಶಿಗೆ ದಿಕ್ಕೆ ಇಲ್ಲದಂತೆ ಮಾಡಿದ್ದಾರೆ. ಚುನಾವಣಾ ಮುಗಿದ ಮೇಲೆ ಡಿಕೆಶಿಗೆ ದೇವರೆ ದಿಕ್ಕು ಎಂದು ಅಶೋಕ್ ಅಪಹಾಸ್ಯ ಮಾಡಿದರು.

ಕಾಂಗ್ರೆಸ್ ಮತ ಕೇಳ್ತಿಲ್ಲ. ಅವರದ್ದು ಪ್ರೊಟೆಸ್ಟ್ ಪಾಲಿಟಿಕ್ಸ್. ಏಕೆಂದರೆ ಮತ ಕೇಳೋಕೆ ಅವರ ಪರ ಜನರೇ ಇಲ್ಲ. ಹೀಗಾಗಿ ಪ್ರೊಟೆಸ್ಟ್ ಮಾಡ್ತಾ ಇದ್ದಾರೆ ಎಂದು ಅವರು ಟೀಕಿಸಿದರು.  ನೆನ್ನೆಯ ಕಾಂಗ್ರೆಸ್ ಪ್ರತಿಭಟನೆ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಶೋಕ್, ಆರ್‍ಆರ್ ನಗರದಲ್ಲಿ ಟ್ರೆಂಡ್ ಚೇಂಜ್ ಆಗಿದೆ ಎಂದರು.

ನಮ್ಮ ಧಮ್ ಬಗ್ಗೆ ಸಿದ್ದರಾಮಯ್ಯ ಪ್ರಶ್ನೆ ಮಾಡುತ್ತಾರೆ. ತ್ರಿವಳಿ ತಲಾಕ್ ರದ್ದು, ಆರ್ಟಿಕಲ್ 370 , ಸಿಎಎ ಇವೆಲ್ಲಾ ಬಿಜೆಪಿಯ ಧಮ್. ನಿಮ್ಮ ಧಮ್ ಏನೆಂದು ಹೇಳಿ ಎಂದು ಆರ್.ಅಶೋಕ್ ಸವಾಲು ಹಾಕಿದರು.

Facebook Comments