ತಕ್ಷಣವೇ ವಿಧಾನಮಂಡಲದ ಅಧಿವೇಶನ ಕರೆಯಲು ಅಶೋಕ್ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.19- ಜಿಂದಾಲ್ ಕಂಪನಿಗೆ ರಾಜ್ಯ ಸರ್ಕಾರ ಭೂಮಿ ನೀಡುವ ವಿಚಾರ ಸೇರಿದಂತೆ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲು ತಕ್ಷಣವೇ ರಾಜ್ಯ ವಿಧಾನಮಂಡಲದ ಅಧಿವೇಶನ ಕರೆಯಬೇಕೆಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚರ್ಚೆಗೆ ಆಹ್ವಾನಿಸಿದ್ದಾರೆ. ನಾವು ವಿಧಾನಸಭೆ ಅಧಿವೇಶನದಲ್ಲೆ ಆ ವಿಚಾರವನ್ನು ಚರ್ಚೆ ಮಾಡುತ್ತೇವೆ. ಆಗ ಅದರ ಸತ್ಯಸತ್ಯತೆ ಹೊರಬರಲಿದೆ ಎಂದರು.

ಜಿಂದಾಲ್ ಕಂಪನಿಗೆ ಜಮೀನು ನೀಡುವುದನ್ನು ವಿರೋಧಿಸಿ ನಾವು ಪ್ರತಿಭಟನೆ ನಡೆಸುವುದಾಗಿ ಪ್ರಕಟಿಸಿದಾಗ ಮಾಹಿತಿ ನೀಡಬಹುದಿತ್ತು. ಧರಣಿ ಕೂತಾಗಲೂ ಇಲ್ಲ. ನಾವು ಮುಖ್ಯಮಂತ್ರಿ ಮನೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದಾಗಲೂ ನಮ್ಮ ನಾಯಕರನ್ನು ಕರೆದು ಚರ್ಚಿಸಬಹುದಿತ್ತು. ಆದರೆ ಸಚಿವರೊಬ್ಬರನ್ನು ಕಳುಹಿಸಿದ್ದರು ಎಂದರು.

ಇದನ್ನು ನೋಡಿದರೆ ಸರ್ಕಾರ ಮಾಹಿತಿ ಕೊಟ್ಟಂಗೂ ಇರಬೇಕು, ಬಿಟ್ಟಂಗೂ ಆಗಬೇಕು ಎಂಬಂತಾಗಿದೆ. ನೈಜವಾದ ಸ್ಪಂದನೆ ಸಿಗಲಿಲ್ಲ. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎಂದು ಪ್ರಶ್ನಿಸಿದ ಅವರು, ಜಿಂದಾಲ್ ವಿರುದ್ಧ ಹೋರಾಟವನ್ನು ತಾರ್ಕಿಕ ಅಂತ್ಯದವರೆಗೂ ಕೊಂಡೊಯ್ಯುತ್ತೇವೆ. ಜಿಲ್ಲಾ ಮಟ್ಟಕ್ಕೂ ಹೋರಾಟವನ್ನು ನಡೆಸುತ್ತೇವೆ ಎಂದರು.

ಜಿಂದಾಲ್‍ಗೆ ಭೂಮಿ ನೀಡುವ ವಿಚಾರದಲ್ಲಿ ದನಿ ಎತ್ತಿದವರು ಬಿಜೆಪಿಯವರು ಮಾತ್ರವಲ್ಲ. ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಎಚ್.ಕೆ.ಪಾಟೀಲ್, ಜೆಡಿಎಸ್ ಶಾಸಕ ಎಚ್.ವಿಶ್ವನಾಥ್ ಸೇರಿದಂತೆ ಹಲವರು ವಿಷಯ ಪ್ರಸ್ತಾಪ ಮಾಡಿದ್ದಾರೆ. ಅವರಿಗಾದರೂ ಸಮಂಜಸವಾದ ಉತ್ತರ ನೀಡಬೇಕು ಎಂದರು.

ಜಿಂದಾಲ್ ಕಂಪನಿಗೆ ಜಮೀನು ಬೇಕಿಲ್ಲ. ಅವರು ಸರ್ಕಾರದಿಂದ ಪಡೆದ ಜಮೀನನ್ನು ಅಡವಿಟ್ಟು ಬ್ಯಾಂಕ್‍ನಿಂದ ಹೆಚ್ಚಿನ ಹಣವನ್ನು ಪಡೆಯುತ್ತಾರೆ. ಈಗಾಗಲೇ ಸುಮಾರು 17 ಸಾವಿರ ಎಕರೆ ಜಮೀನನ್ನು ಜಿಂದಾಲ್ ಕಂಪನಿಗೆ ನೀಡಲಾಗಿದೆ.

ಗಣಿಗಾರಿಕೆಗೆ ಜಮೀನು ಪಡೆದು ಹೋಟೆಲ್ ನಡೆಸುತ್ತಿದ್ದಾರೆ. ಇದೊಂದು ದೊಡ್ಡ ಹಗರಣವಾಗಿದೆ. ಜಿಂದಾಲ್ ಕಂಪನಿಯಿಂದ ಅಧಿಕಾರಿ ಮಟ್ಟದ ಹುದ್ದೆಗಳು ಸೇರಿದಂತೆ ಎಷ್ಟು ಮಂದಿಗೆ ಉದ್ಯೋಗ ದೊರೆತಿದೆ. ಕೈಗಾರಿಕೆ ಎಷ್ಟು ನಡೆಸಲಾಗುತ್ತಿದೆ ಎಂಬ ಮಾಹಿತಿಯನ್ನು ನೀಡಬೇಕೆಂದು ಒತ್ತಾಯಿಸಿದರು.

ಬಹುಕೋಟಿ ವಂಚನೆ ಆರೋಪದ ಐಎಂಎ ಹಗರಣವನ್ನು ಸಿಬಿಐಗೆ ವಹಿಸುವಂತೆ ಬಿಜೆಪಿ ಸಂಸದರು ಸದ್ಯದಲ್ಲೇ ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿರುವ ಜೆ.ಪಿ.ನಡ್ಡ ಅವರಿಗೆ ಅಭಿನಂದನೆ ಸಲ್ಲಿಸಿದ ಅವರು, ಕಳೆದ ಬಾರಿಗಿಂತ ಈ ಬಾರಿ ಬಿಜೆಪಿಯ ಸದಸ್ಯತ್ವ ನೋಂದಣಿಯನ್ನು ಹೆಚ್ಚು ಮಾಡುವ ಉದ್ದೇಶವಿದೆ. ಈ ಬಾರಿಯ ಲೋಕಸಭೆ ಚುನಾವಣೆಗಿಂತ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತಷ್ಟು ಹೆಚ್ಚು ಸ್ಥಾನಗಳಲ್ಲಿ ಗೆಲ್ಲಬೇಕೆಂಬ ಗುರಿ ಇದೆ ಎಂದರು.

Facebook Comments