ಸಚಿವ ಅಶೋಕ್ ಹಾಗೂ ಸಂಸದ ತೇಜಸ್ವಿ ಸೂರ್ಯಗೆ ಕೊರೊನಾ ಆತಂಕ…!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.2- ನಾಲ್ಕು ದಿನದ ಹಿಂದೆ ಕಂದಾಯ ಸಚಿವ ಆರ್.ಅಶೋಕ್ ನಡೆಸಿದ್ದ ಸಭೆಯಲ್ಲಿ ಭಾಗಿಯಾಗಿದ್ದ, ಮಹಿಳಾ ವೈದ್ಯರೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಸಭೆ ನಡೆಸಿದ್ದ ಅಶೋಕ್ ಹಾಗೂ ಸಂಸದ ತೇಜಸ್ವಿ ಸೂರ್ಯಗೆ ಆತಂಕ ಎದುರಾಗಿದೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೋಮ್ ಕ್ವಾರಂಟೈನ್‍ಗೆ ಒಳಗಾಗಿದ್ದ ಹಿನ್ನೆಲೆಯಲ್ಲಿ ಬೆಂಗಳೂರು ಕೋವಿಡ್ ಜವಾಬ್ದಾರಿ ಹೊತ್ತಿದ್ದ ಸಚಿವ ಆರ್.ಅಶೋಕ್ ಜೂ.27ರಂದು ನಗರದ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ್ದ ಅಶೋಕ್ ಆಹಾರ ಪೂರೈಕೆಯಲ್ಲಿ ಸಮಸ್ಯೆ ಕೇಳಿ ಬಂದ ಕುರಿತು ಅಡುಗೆ ಭೇಟಿ ನೀಡಿ ಪರೀಶೀಲನೆ ನಡೆಸಿದರು. ಸ್ವತಃ ಊಟವನ್ನೂ ಮಾಡಿ ರುಚಿ ನೋಡಿದ್ದರು. ನಂತರ ಬೆಂಗಳೂರು ಮೆಡಿಕಲ್ ಕಾಲೇಜು ಡೀನ್ ಹಾಗೂ ವೈದ್ಯರ ಜತೆ ಸಭೆ ನಡೆಸಿದ್ದಾರೆ.

ಆ ಸಭೆಯಲ್ಲಿದ್ದ ಮಹಿಳಾ ವೈದ್ಯರೊಬ್ಬರಿಗೆ ಇದೀಗ ಕೊರೊನಾ ಪಾಸಿಟಿವ್ ಬಂದಿದೆ. ಹಾಗಾಗಿ ಇವರು ಕ್ವಾರಂಟೈನ್ ಆಗಬೇಕು ಎನ್ನುವ ವಾದ ಕೇಳಿಬಂದಿದೆ. ಸಚಿವ ಅಶೋಕ್ ನಡೆಸಿದ್ದ ಸಭೆಯಲ್ಲಿದ್ದ ವೈದ್ಯೆಗೆ ಕೊರೊನಾ: ಸಚಿವ ಅಶೋಕ್ ಜತೆ ಸಂಸದ ತೇಜಸ್ವಿ ಸೂರ್ಯ, ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್, ಶಾಸಕ ಜಮೀರ್ ಅಹಮದ್ ಕೂಡ ಇದ್ದರು.

ಇವರೆಲ್ಲರಿಗೂ ಇದೀಗ ಭೀತಿ ಎದುರಾಗಿದೆ. ಇವರ ಪ್ರಾಥಮಿಕ ಸಂಪರ್ಕಿತರು ಎಂದು ಬೆಂಗಳೂರು ಮೆಡಿಕಲ್ ಕಾಲೇಜಿನ ಡೀನ್ ಜಯಂತಿ ಒಂದು ಪತ್ರ ಬಿಡುಗಡೆ ಮಾಡಿದ್ದಾರೆ. ನಾವು ಸಭೆ ಮಾಡುವಾಗ ಎಲ್ಲಾ ಮುಂಜಗ್ರತಾ ಕ್ರಮ ತೆಗೆದುಕೊಂಡಿದ್ದೆವು.

ಹಾಗಾಗಿ ಯಾರೂ ಕ್ವಾರಂಟೈನ್ ಆಗುವ ಅಗತ್ಯವಿಲ್ಲ ಎಂದು ಪತ್ರ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ. ಪತ್ರವನ್ನು ಮುಂದಿಟ್ಟುಕೊಂಡು ಈ ಎಲ್ಲಾ ರಾಜಕಾರಣಿಗಳು ಕ್ವಾರಂಟೈನ್‍ನಿಂದ ಹೊರಗೆ ಉಳಿದಿದ್ದಾರೆ.

ಜನ ಸಾಮಾನ್ಯರಾಗಿದ್ದರೆ ಕ್ವಾರಂಟೈನ್ ಮಾಡಲಾಗುತ್ತಿತ್ತು. ಆದರೆ, ಈ ನಾಯಕರಿಗೆ ಯಾಕೆ ಕ್ವಾರಂಟೈನ್ ಮಾಡಿಲ್ಲ ಎನ್ನುವ ಪ್ರಶ್ನೆ ಎದುರಾಗಿದೆ.

Facebook Comments