ಡಿ.ಕೆ.ಶಿವಕುಮಾರ್ ಗೋಸ್ಕರ ದೇಶದ ಕಾನೂನು ಬದಲಿಸಲಾಗಲ್ಲ : ಆರ್. ಅಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು. ಸೆ.11 : ದೇಶದ ಕಾನೂನು ಎಲ್ಲರಿಗೂ ಒಂದೇ.ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೋಸ್ಕರ ಕಾನೂನು ಬದಲಾವಣೆ ಮಾಡಲು ಸಾಧ್ಯವಿಲ್ಲವೆಂದು ಹೇಳುವ ಮೂಲಕ ಕಂದಾಯ ಸಚಿವ ಆರ್. ಅಶೋಕ್ ಪ್ರತಿಭಟನೆಯನ್ನು ಟೀಕಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನೂ ಕೂಡ ಪರಿಸರಕ್ಕಾಗಿ ಹೋರಾಟ ಮಾಡಿರುವುದನ್ನು ನೋಡಿದ್ದೇನೆ. ನ್ಯಾಯಕ್ಕಾಗಿ ಹೋರಾಟ ಮಾಡಿರುವುದು ನೋಡಿದ್ದೇನೆ.

ಇದೇ ಮೊದಲ ಬಾರಿಗೆ ಇಂತಹ ವಿಷಯಕ್ಕೆ ಹೋರಾಟ ಮಾಡುವುದನ್ನು ನೋಡುತ್ತಿದ್ದೇನೆ. ಡಿ.ಕೆ.ಶಿವಕುಮಾರ್‌ಗಾಗಿ ಈ ನೆಲದ ಕಾನೂನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಟಾಂಗ್ ನೀಡಿದರು. ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಿ.ಎಸ್. ಯಡಿಯೂರಪ್ಪ, ಜನಾರ್ದನ ರೆಡ್ಡಿ ಅವರನ್ನು ಬಂಧನ ಮಾಡಿದ್ದ.

ನೆಲದ ಕಾನೂನು ಎಲ್ಲಾರಿಗೂ ಒಂದೇ ಎಂದರು.ಕಾನೂನಾತ್ಮಕವಾಗಿ ಹಾಗೂ ಸಂವಿಧಾನಾತ್ಮಕವಾಗಿ ಜಾರಿ ನಿರ್ದೇಶನಾಲಯ (ಇಡಿ), ಸಿಬಿಐ ರಚನೆ ಆಗಿದೆ. ಯಡಿಯೂರಪ್ಪ, ಜನಾರ್ಧನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯನಾಯ್ಡು ಬಂಧನವಾದಾಗ ಯಾರು ಹೀಗೆ ಮಾಡಿಲ್ಲ. ಶಿವಕುಮಾರ್ ಬಂಧನವಾದಾಗ ಇದೆಲ್ಲ ಆಗುತ್ತದೆ ಎಂದು ಕಿಡಿಕಾರಿದರು.

ಯಾವುದೇ ಜಾತಿ ಅವರಾಗಲಿ ತಪ್ಪು ಮಾಡಿದರೆ ಅದು ತಪ್ಪು. ಸುಮ್ಮನೆ ಇದರಲ್ಲಿ ಜಾತಿ ವಿಷಯ ತಂದಿರೋದು ಅಕ್ಷಮ್ಯ. ಈ ಹೋರಾಟ ಒಳ್ಳೆಯದಲ್ಲ. ಕಾಂಗ್ರೆಸ್ ಸುಮ್ಮನೆ ಇದನ್ನು ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರತಿಭಟನೆಗೆ ಬಿಜೆಪಿ ಬೆಂಬಲ ಕೊಟ್ಟಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಸ್ಪಷ್ಟಪಡಿಸಿದ ಅಶೋಕ್, ಇಂತಹ ವಿಷಯಗಳಿಗೆ ಬಿಜೆಪಿ ಯಾವತ್ತು ಬೆಂಬಲ ಕೊಡುವುದಿಲ್ಲ.

ಕಾನೂನುಬಾಹಿರ ಕೆಲಸಗಳಿಗೆ ಬಿಜೆಪಿ ಬೆಂಬಲ ಕೊಡುವುದಿಲ್ಲವೆಂದು ಕರವೇ ಅಧ್ಯಕ್ಷ ನಾರಾಯಣಗೌಡರಿಗೆ ತಿರುಗೇಟು ನೀಡಿದರು. ಈ ವಿಷಯದಲ್ಲಿ ಜಾತಿ ರಾಜಕಾರಣ ಮಾಡೋದು ಸರಿಯಲ್ಲ.ಇದನ್ನು ದೇಶದ ಜನ ಒಪ್ಪುವುದಿಲ್ಲ, ನ್ಯಾಯಾಲಯ ಇದೆ.

ಅಲ್ಲಿ ಸತ್ಯ ಗೊತ್ತಾಗುತ್ತದೆ. ಕಾನೂನಿಗೆ ಎಲ್ಲರೂ ಒಂದೇ ಎಂದ ಅವರು, ಐಟಿ, ಇಡಿ, ದಾಳಿ ಹಿಂದೆ ಕೇಂದ್ರದ ಕೈವಾಡ ಇಲ್ಲ. ಸುಮ್ಮನೆ ಜಾತಿ ರಾಜಕಾರಣ ಮಾಡುವುದು ಸರಿಯಲ್ಲ ಎಂದರು.

ಹಲವರು ಸರ್ಕಾರಿ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ಅವರಿಂದ ಸಕ್ರಮಗೊಳಿಸಲು ಒಟ್ಟು 52,800 ಅರ್ಜಿಗಳು ಬಂದಿದ್ದವು. ಅವುಗಳಲ್ಲಿ 11,964 ಸಕ್ರಮಗೊಳಿಸಲು ಒಪ್ಪಿಗೆ ನೀಡಲಾಗಿದೆ. 25 ಸಾವಿರ ಅರ್ಜಿಗಳು ತಿರಸ್ಕೃತವಾಗಿವೆ.

ಸರ್ಕಾರಿ ಭೂಮಿಯಲ್ಲಿ ಮನೆ ಕಟ್ಟಿಕೊಂಡವರಿಗೆ 94 ಸಿಸಿ ಅಡಿ ಅರ್ಜಿ ಸಲ್ಲಿಸಿದ್ದ 10 ಸಾವಿರ ಜನರಿಗೆ ನೋಂದಣಿ ಮಾಡಿಕೊಡಲು ನಿರ್ಧರಿಸಲಾಗಿದೆ. ನವೆಂಬರ್‌ನಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಿ ನೋಂದಣಿ ಪತ್ರ ನೀಡಲಾಗುತ್ತದೆ. 1200 ಅಡಿ ಹಾಗೂ ಅದಕ್ಕಿಂತ ಕಡಿಮೆ ಅಳತೆಯ ಸರ್ಕಾರಿ ನಿವೇಶನದಲ್ಲಿ ಮನೆ ಕಟ್ಟಿಕೊಂಡಿದ್ದರೆ ಸಕ್ರಮಗೊಳಿಸಿ ನೋಂದಣಿ ಮಾಡಿಕೊಡಲಾಗುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ ಪ್ರವಾಹದಿಂದ 38,451 ಕೋಟಿ ಆಸ್ತಿ ಪಾಸ್ತಿ ನಷ್ಟವಾಗಿದೆ. 26 ಕಾಳಜಿ ಕೇಂದ್ರಗಳಲ್ಲಿ 5631 ಮಂದಿ ಮಾತ್ರ ಈ ಕೇಂದ್ರಗಳಲ್ಲಿ ಇದ್ದಾರೆ. 20259 ನಿರಾಶ್ರಿತರಿಗೆ 10 ಸಾವಿರ ರೂ. ಪರಿಹಾರ ವಿತರಣೆ ಮಾಜಲಾಗಿದೆ.

1298 ಮಂದಿಗೆ ಮಾತ್ರ ಪರಿಹಾರ ಕೊಡಬೇಕಾಗಿದೆ. ಇದು ಬೆಳಗಾವಿ ಜಿಲ್ಲೆಯಲ್ಲಿ ಮಾತ್ರ ಕೊಡಬೇಕಿದೆ. ಸುಳ್ಳು ಮಾಹಿತಿ, ಬೋಗಸ್ ದಾಖಲೆ ಕೊಟ್ಟಿರುವ ಕುರಿತು ದೂರುಗಳು ಬಂದ ಹಿನ್ನಲೆ 10 ಸಾವಿರ ಪರಿಹಾರ ವಿತರಣೆ ಆಗಿಲ್ಲ. 1298 ಕುಟುಂಬಗಳ ಕುರಿತು ತನಿಖೆ ನಡೆಸಿ ಅರ್ಹರಾಗಿದ್ದರೆ ತಕ್ಷಣ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು.

Facebook Comments

Sri Raghav

Admin