ಕೊರೋನಾ ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಲಾಕ್‍ಡೌನ್..!?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.13- ಯಾವ ಯಾವ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗಿವೆಯೋ ಅಂತಹ ಕಡೆ ಜಿಲ್ಲಾಧಿಕಾರಿಗಳು ಮತ್ತು ತಜ್ಞರು ನೀಡುವ ವರದಿ ಮೇಲೆ ಲಾಕ್‍ಡೌನ್ ಜಾರಿ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಕಾಏಕಿ ಕೆಲವು ಜಿಲ್ಲೆಗಳಲ್ಲಿ ಲಾಕ್‍ಡೌನ್ ಜಾರಿ ಮಾಡಲು ಸಾಧ್ಯವಿಲ್ಲ. ಸೋಂಕಿನ ಪ್ರಕರಣಗಳು ಹೆಚ್ಚಾಗಿರುವುದು ಹಾಗೂ ಪರಿಸ್ಥಿತಿ ಕೈ ಮೀರಿದ್ದರೆ ಅಂತಹ ಕಡೆ ಜಿಲ್ಲಾಧಿಕಾರಿಗಳು ಹಾಗೂ ತಜ್ಞರ ವರದಿ ಆಧಾರದ ಮೇಲೆ ಕ್ರಮ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.

ಇಂದು ಮುಖ್ಯಮಂತ್ರಿಯವರು ವಿಡಿಯೋ ಕಾನ್ಫರೆನ್ಸ್ ನಡೆಸಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆಯುತ್ತಾರೆ. ಜಿಲ್ಲಾಧಿಕಾರಿಗಳು ನೀಡುವ ವರದಿ ಮೇಲೆ ಸಿಎಂ ಯಡಿಯೂರಪ್ಪ ಸರಿಯಾದ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

ಈಗಾಗಲೇ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ನಾಳೆ ಸಂಜೆಯಿಂದ ಅನ್ವಯವಾಗುವಂತೆ ಒಂದು ವಾರ ಕಾಲ ಲಾಕ್‍ಡೌನ್ ಘೋಷಣೆ ಮಾಡಲಾಗಿದೆ.

ಬೇರೆ ಜಿಲ್ಲೆಗಳಲ್ಲಿ ಇದನ್ನು ಜಾರಿ ಮಾಡುವ ಕುರಿತಂತೆ ಮುಖ್ಯಮಂತ್ರಿಯವರು ಸೂಕ್ತ ನಿರ್ಧಾರ ತೆಗೆದುಕೊಳ್ಳುವರು ಎಂದು ಹೇಳಿದರು.

ಮಂಗಳವಾರದವರೆಗೆ ಕಾಲಾವಕಾಶವಿದ್ದು ಬೆಂಗಳೂರು ಬಿಟ್ಟು ಹೋಗುವವರು ಲಾಕ್‍ಡೌನ್ ಜಾರಿಯಾಗುವ ಮುನ್ನವೇ ತಮ್ಮ ಗ್ರಾಮಗಳನ್ನು ಸುರಕ್ಷಿತವಾಗಿ ಸೇರಿಕೊಳ್ಳಬಹುದು ಎಂದರು.

Facebook Comments

Sri Raghav

Admin