ಕಾಂಗ್ರೆಸ್ ಅಖಂಡ ಪರವೋ.. ಸಂಪತ್ರಾಜ್ ಕಡೆಯೋ..? : ಸಚಿವ ಆರ್.ಅಶೋಕ್ ಪ್ರಶ್ನೆ
ಬೆಂಗಳೂರು, ನ.17- ಪ್ರತಿ ಪಕ್ಷ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಪರವೋ ಅಥವಾ ಆರೋಪಿ ಸಂಪತ್ರಾಜ್ ಪರವೋ ಎಂಬುದನ್ನು ಜನತೆಯ ಮುಂದೆ ಸಾಬೀತುಪಡಿಸಲಿ ಎಂದು ಸಚಿವ ಆರ್.ಅಶೋಕ್ ಸವಾಲು ಹಾಕಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತ ಶಾಸಕರ ಮನೆಗೆ ಬೆಂಕಿ ಹಚ್ಚಿ ಅವರನ್ನು ಕೊಲೆ ಮಾಡಲು ಯತ್ನಿಸಲಾಗಿತ್ತು. ಈಗ ಕಾಂಗ್ರೆಸ್ ನಾಯಕರು ಮಾತನಾಡುತ್ತಿರುವುದನ್ನು ನೋಡಿದರೆ ಆರೋಪಿ ಸ್ಥಾನದಲ್ಲಿರುವ ಸಂಪತ್ ರಾಜ್ನನ್ನು ರಕ್ಷಣೆ ಮಾಡುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದೆ ಎಂದು ದೂರಿದರು.
ನೀವು ಆರೋಪಿಗಳ ಪರವಾಗಿದ್ದಿರೋ, ಇಲ್ಲವೇ ಅನ್ಯಾಯಕ್ಕೊಳಗಾದ ಶಾಸಕರ ಪರವಾಗಿದ್ದಿರೋ ಎಂಬುದನ್ನು ಜನತೆಗೆ ತಿಳಿಸಬೇಕು. ಘಟನೆಗೆ ಕಾರಣರಾದವರನ್ನು ಬಂಧಿಸಿ ಎಂದು ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಇಲ್ಲವೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಂದೇ ಒಂದು ಪ್ರತಿಭಟನೆ ಮಾಡಿದ್ದರೆ ಎಂದು ಪ್ರಶ್ನಿಸಿದರು.
ನನಗೆ ನ್ಯಾಯ ಕೊಡಿಸಿ ಎಂದು ಸ್ವತಃ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮಾಧ್ಯಮಗಳ ಮುಂದೆ ಗೋಗರೆದರೂ ಕಾಂಗ್ರೆಸ್ ನಾಯಕರು ಕ್ಯಾರೇ ಎನ್ನಲಿಲ್ಲ. ಬದಲಿಗೆ ಸಂಪತ್ರಾಜ್ ಬಂಧಿಸಿದ್ದೇ ಮಹಾ ಅಪರಾಧ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ದಲಿತರ ವೋಟಿಗಾಗಿ ಮೊಸಳೆ ಕಣ್ಣೀರು ಹಾಕುತ್ತಿರುವುದು ಸಾಬೀತಾಗಿದೆ ಎಂದು ವ್ಯಂಗ್ಯವಾಡಿದರು.
ಮತಗಳಿಕೆಗಾಗಿ ದಲಿತರ ಪರ ಕಣ್ಣೀರು ಹಾಕುವುದನ್ನು ಈಗಲಾದರೂ ಬಿಡಬೇಕು. ಅಖಂಡ ಶ್ರೀನಿವಾಸಮೂರ್ತಿ ಶಾಸಕರಾಗಿದ್ದು, ಅವರಿಗೆ ರಕ್ಷಣೆ ಕೊಡುವುದು ಸರ್ಕಾರದ ಜವಾಬ್ದಾರಿ. ಆರೋಪಿಗಳನ್ನು ಯಾರೊಬ್ಬರೂ ರಕ್ಷಣೆ ಮಾಡಲು ಮುಂದಾಗಬಾರದೆಂದು ಅಶೋಕ್ ಮನವಿ ಮಾಡಿದರು.
ಕೇಂದ್ರದಿಂದ ನೆರೆ ಪೀಡಿತ ಜಿಲ್ಲೆಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಅಡಿಯಲ್ಲಿ ರಾಜ್ಯಕ್ಕೆ 557 ಕೋಟಿ ರೂ. ಪರಿಹಾರ ಘೋಷಣೆಯಾಗಿದೆ. ಇದು ಮೊದಲ ಕಂತಿನ ಪರಿಹಾರವಾಗಿದ್ದು, ರಾಜ್ಯಕ್ಕೆ ಇನ್ನಷ್ಟು ಹೆಚ್ಚಿನ ನೆರವು ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸರ್ಕಾರದ ಬಳಿ ನೆರೆ ಪರಿಹಾರ ಕಾರ್ಯಕ್ಕೆ ಹಣದ ಕೊರತೆ ಇಲ್ಲ. ನೆರೆ ಪೀಡಿತ ಜಿಲ್ಲೆಗಳಲ್ಲಿ ಮನೆ ಕಳೆದುಕೊಂಡವರು ಪರಿಹಾರವನ್ನು ಪಡೆದಿಲ್ಲ. ಇಂತಹ ಸಂತ್ರಸ್ತರನ್ನು ಗುರುತಿಸಿ ಪರಿಹಾರ ನೀಡುತ್ತೇವೆ ಎಂದು ಹೇಳಿದರು. ಕೇಂದ್ರ ಸರ್ಕಾರ ಸದ್ಯ ನಮಗೆ 557 ಕೋಟಿ ರೂ. ನೆರವು ನೀಡಿದೆ. ಇದು ಅಲ್ಪಮೊತ್ತವೆಂದು ಭಾವಿಸಬಾರದು. ನಮಗೆ ಇನ್ನು ಹೆಚ್ಚಿನ ಪರಿಹಾರ ಸಿಗಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.