ಸರ್ಕಾರ ಉಳಿಸಿಕೊಳ್ಳುವುದು ಬಿಡುವುದು ಕೈಗೆ ಬಿಟ್ಟದ್ದು…!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.26- ಸಮ್ಮಿಶ್ರ ಸರ್ಕಾರವನ್ನು ಉಳಿಸುವುದು -ಬಿಡುವುದು ಕಾಂಗ್ರೆಸ್‍ಗೆ ಬಿಟ್ಟಿದ್ದೇವೆ. ಈ ಸರ್ಕಾರದ ಬಗ್ಗೆ ನಾವು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಹೇಳಿದ್ದಾರೆ.

ಪಕ್ಷದ ಕಚೆರಿಯಲ್ಲಿ ಮಾತನಾಡಿದ ಅವರು, ದೋಸ್ತಿ ಸರ್ಕಾರವನ್ನು ಕೆಡವಲು ಕಾಂಗ್ರೆಸಿಗರ ಒಂದು ಗುಂಪು ತುದಿಗಾಲಲ್ಲಿ ನಿಂತಿದೆ. 20ಕ್ಕೂ ಹೆಚ್ಚು ಶಾಸಕರು ಮುಖ್ಯಮಂತ್ರಿ ಕುಮಾರಸ್ವಾಮಿ ನಾಯಕತ್ವದ ವಿರುದ್ದ ಸಿಡಿದೆದ್ದಿದ್ದಾರೆ. ತಮ್ಮ ವೈಫಲ್ಯವನ್ನು ಮರೆಮಾಚಲು ಆಪರೇಷನ್ ಕಮಲ ಆರೋಪ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ನಾವು ಆಪರೇಷನ್ ಕಮಲವನ್ನೂ ನಡೆಸುವುದಿಲ್ಲ. ಯಾವ ಶಾಸಕರಿಗೂ ಗಾಳ ಹಾಕುವ ಅಗತ್ಯವೂ ಇಲ್ಲ. ಈಗಾಗಲೇ ಅನೇಕ ಶಾಸಕರು ಸರ್ಕಾರದ ವರ್ತನೆಯಿಂದ ಬೇಸತ್ತು ಹೊರಬರಲು ತುದಿಗಾಲಲ್ಲಿ ನಿಂತಿದ್ದಾರೆ. ಲೋಕಸಭೆ ಚುನಾವಣೆ ಫಲಿತಾಂಶದವರೆಗೂ ಕಾದು ನೋಡಿ ಎಂದು ಮಾರ್ಮಿಕವಾಗಿ ನುಡಿದರು.

ನಿನ್ನೆ ಮುಖ್ಯಮಂತ್ರಿ ಜೊತೆ ಕಾಂಗ್ರೆಸ್‍ನ ಕೆಲ ಮುಖಂಡರು ಮಾತುಕತೆ ನಡೆಸಿದ ನಂತರ ಪರಿಸ್ಥಿತಿ ಇನ್ನಷ್ಟು ಕಠಿಣವಾಗುತ್ತಿದೆ. ರಮೇಶ್ ಜಾರಕಿಹೊಳಿ ಜೊತೆ ಅತೃಪ್ತ ಶಾಸಕರು ತೆರೆಮರೆಯಲ್ಲಿ ಕೈ ಜೋಡಿಸುವ ಸಾಧ್ಯತೆ ಇರುವುದರಿಂದ ಸರ್ಕಾರ ಈಗ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸಿಗರೇ ಸರ್ಕಾರವನ್ನು ಉರುಳಿಸುತ್ತಾರೆ. ಚುನಾವಣಾ ಫಲಿತಾಂಶ ಕೇವಲ ಅವರಿಗೆ ನೆಪವಷ್ಟೆ. ನಾವು ಏ.23ರ ನಂತರ ಸರ್ಕಾರ ಅಸ್ಥಿರಗೊಳ್ಳಬಹುದೆಂದು ನಿರೀಕ್ಷೆ ಮಾಡಿದ್ದೆವು. ಆದರೆ ಅಷ್ಟರೊಳಗೆ ಅತೃಪ್ತರು ಸರ್ಕಾರದ ವಿರುದ್ಧ ಸಿಡಿದೆದ್ದಿರುವುದು ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಸಾಬೀತಾಗಿದೆ ಎಂದು ಹೇಳಿದರು.

ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರ ಅಧಿಕಾರಾವಧಿಯನ್ನು ಪೂರ್ಣಗೊಳಿಸುವುದಿಲ್ಲ. ಅವರ ಆಂತರಿಕ ಕಚ್ಚಾಟದಿಂದಲೇ ಸರ್ಕಾರ ಬಿದ್ದು ಹೋಗುತ್ತದೆ. ಅಧಿಕೃತ ವಿರೋಧ ಪಕ್ಷವಾಗಿ ನಾವು ಏನು ಮಾಡಬೇಕೋ ಅದನ್ನು ಮಾಡುತ್ತಿದ್ದೇವೆ.
ಕಾಂಗ್ರೆಸ್ -ಜೆಡಿಎಸ್ ಏನೇ ಆರೋಪಿಸಿದರೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Facebook Comments